​ಈ ಕಲಾಪ್ರೇಮಿ, ಐದು ಬಾರಿಯ ಸಿಎಂ ಆಲ್‌ಸೀಸನ್ ಲೀಡರ್!

Update: 2019-05-24 04:04 GMT

ಭುವನೇಶ್ವರ, ಮೇ 24: ಐದು ದಶಕಗಳ ಹಿಂದೆ ರಾಷ್ಟ್ರರಾಜಧಾನಿಯಲ್ಲಿ ಸೈಚೆದೆಲ್ಲಿ ಎಂಬ ಕಲಾ ಮಳಿಗೆ ತೆರೆಯಲು ಹಿಂದಿನ ರಾಜ ಮಾರ್ತಾಂಡ್ ಸಿಂಗ್ ಜತೆ ಕೈಜೋಡಿಸಿದ್ದ ಈ ಕಲಾಪ್ರೇಮಿ ಇದೀಗ ಐದನೇ ಬಾರಿ ಒಡಿಶಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಬಿಜು ಜನತಾದಳ ಸಂಸ್ಥಾಪಕ ಬಿಜು ಪಟ್ನಾಯಕ್ ಅವರ ಕಿರಿಯ ಮಗ ರಾಜಕೀಯವಾಗಿ ಈ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಯಾರೂ ಕಲ್ಪನೆ ಕೂಡಾ ಮಾಡಿರಲಿಲ್ಲ.

1997ರಲ್ಲಿ ಬಿಜು ಪಟ್ನಾಯಕ್ ಮೃತಪಟ್ಟಾಗ ಅವರ ಅನುಯಾಯಿಗಳು ಉತ್ತರಾಧಿಕಾರಿಯ ಹುಡುಕಾಟದಲ್ಲಿದ್ದರು. ಹೊಸದಾಗಿ ಸ್ಥಾಪನೆಯಾದ ಈ ಪ್ರಾದೇಶಿಕ ಪಕ್ಷ ಅನುಕಂಪದ ಅಲೆಯ ಲಾಭ ಪಡೆಯುವ ಸಲುವಾಗಿ ತಂದೆಯ ಹೊಣೆ ನವೀನ್ ಹೆಗಲೇರಿತು. 2000ನೇ ಇಸವಿಯಲ್ಲಿ ನವೀನ್ ಸಿಎಂ ಆಗಲು ಬಿಜೆಪಿ ಜತೆ ಕೈಜೋಡಿಸಿದರು. ಸ್ಥಳೀಯ ಒಡಿಯಾ ಭಾಷೆಯಲ್ಲಿ ಸರಾಗವಾಗಿ ಮಾತನಾಡಲು ಬರದಿದ್ದರೂ, ಅದು ನವೀನ್ ಜನಪ್ರಿಯತೆಗೆ ಅಡ್ಡಿಯಾಗಲಿಲ್ಲ. 2004ರ ಚುನಾವಣೆಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ವಿಫಲರಾದರೂ, ಬಿಜೆಪಿ ಸಖ್ಯ ಹೊಂದಿದ್ದ ನವೀನ್ ಬಿಜೆಪಿ ಜತೆ ಸೇರಿ ವಿಧಾನಸಭೆ ಚುನಾವಣೆ ಗೆದ್ದರು. 2009ರ ಚುನಾವಣೆಯಲ್ಲಿ ಬಿಜೆಪಿ ಜತೆ ಸಂಬಂಧ ಕಡಿದುಕೊಂಡರೂ ಆರಾಮವಾಗಿ ಜಯಶಾಲಿಯಾದರು. 2014ರಲ್ಲಿ ಇಡೀ ದೇಶದಲ್ಲಿ ಮೋದಿ ಅಲೆ ಇದ್ದಾಗ ಕೂಡಾ 147 ಸದಸ್ಯಬಲದ ವಿಧಾನಸಭೆಯ 117 ಸ್ಥಾನಗಳನ್ನು ಹಾಗೂ ರಾಜ್ಯದ 21 ಲೋಕಸಭಾ ಸ್ಥಾನಗಳ ಪೈಕಿ 20ನ್ನು ಗೆದ್ದು ದಾಖಲೆ ಸ್ಥಾಪಿಸಿದರು.

ಆದರೆ ಈ ಚುನಾವಣೆಯಲ್ಲಿ ಮೋದಿ- ಶಾ ಜೋಡಿ ಒಡಿಶಾ ವಶಕ್ಕೆ ಹೊರಟ ಹಿನ್ನೆಲೆಯಲ್ಲಿ ರಾಜ್ಯದ ಉದ್ದಗಲಕ್ಕೂ ಓಡಾಡಿ 150 ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಅಧಿಕಾರ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲುವ ಪ್ರಯತ್ನವಾಗಿ ರಾಜ್ಯದ 57 ಲಕ್ಷಕ್ಕೂ ಅಧಿಕ ರೈತರಿಗೆ ವಾರ್ಷಿಕ 10 ಸಾವಿರ ರೂಪಾಯಿಯನ್ನು ನೇರವಾಗಿ ವರ್ಗಾಯಿಸುವ ಯೋಜನೆ ಆರಂಭಿಸಿದರು.

ಕಳೆದ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ್ದ ಮಹಿಳಾ ಮತದಾರರಿಗೆ ಕೂಡಾ ನಿರಾಸೆ ಮಾಡದೇ, ಸ್ವಸಹಾಯ ಸಂಘಗಳಿಗೆ 15 ಸಾವಿರ ರೂಪಾಯಿಯಿಂದ ಆರು ಲಕ್ಷ ರೂಪಾಯಿವರೆಗೂ ನೆರವು ನೀಡಿದರು. ಈ ಬಾರಿ 21 ಲೋಕಸಭಾ ಕ್ಷೇತ್ರಗಳ ಪೈಕಿ 7 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟರು. ಈ ಪೈಕಿ ಆರು ಮಂದಿ ಗೆಲುವಿನ ನಗೆ ಬೀರಿದ್ದಾರೆ. ಲೋಕಸಭೆಗೆ ಈ ಬಾರಿ 11 ಸದಸ್ಯರನ್ನು ಮಾತ್ರ ಕಳುಹಿಸಲು ಬಿಜೆಡಿಗೆ ಸಾಧ್ಯವಾಗಿದ್ದರೂ, ವಿಧಾನಸಭೆಯಲ್ಲಿ ನಿಚ್ಚಳ ಬಹುಮತ ಸಾಧಿಸಿದೆ. ಗೆಲುವು ಹಾಗೂ ಮುನ್ನಡೆ ಸೇರಿ ಬಿಜೆಡಿ 112 ಸ್ಥಾನಗಳನ್ನು ಗಳಿಸಿದೆ. ಬಿಜೆಪಿ 22 ಸ್ಥಾನಗಳನ್ನು ಪಡೆದಿದೆ.

ಪಶ್ಚಿಮ ಬಂಗಾಳದ ಮಾಜಿ ಸಿಎಂ ಜ್ಯೋತಿ ಬಸು ಹಾಗೂ ಸಿಕ್ಕಿಂನ ಪವನ್ ಚಾಮ್ಲಿಂಗ್ ಮಾತ್ರ ಇದುವರೆಗೆ ಸತತ ಐದು ಬಾರಿ ಸಿಎಂ ಆಗಿದ್ದರು. ಇದೀಗ ನವೀನ್ ಪಟ್ನಾಯಕ್ ಕೂಡಾ ಆ ಸಾಲಿಗೆ ಸೇರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News