ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆ ದುಬಾರಿಯಾಯಿತು ಪ್ರಕಾಶ್ ಅಂಬೇಡ್ಕರ್ ಜೊತೆ ಮಾಡದ ಮೈತ್ರಿ

Update: 2019-05-24 06:43 GMT

ಮುಂಬೈ, ಮೇ 24: ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ್ ಅಘಡಿ (ವಿಬಿಎ) ಅಸಾಸುದ್ದೀನ್ ಉವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಜತೆ ಮಾಡಿದ ಮೈತ್ರಿ ಮಹಾರಾಷ್ಟ್ರದಾದ್ಯಂತ ಕೆಲವೊಂದು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತದರ ಮಿತ್ರ ಪಕ್ಷಗಳಿಗೆ ವರದಾನವಾಗಿ ಪರಿಣಮಿಸಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚವಾಣ್ ಅವರು ಸೋಲುಂಡ ನಂದೇಡ್ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಎನ್‌ಸಿಪಿ ಮತಗಳಿಗೆ ಕೊಡಲಿಯೇಟು ನೀಡಿದೆ. ಹೀಗೆ ಪ್ರಕಾಶ್ ಅಂಬೇಡ್ಕರ್ ಪಕ್ಷದ ಜತೆ ಮೈತ್ರಿ ಮಾಡದೇ ಇರುವುದು ಅಂತಿಮವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ದುಬಾರಿಯಾಗಿ ಪರಿಣಮಿಸಿದೆ.

‘‘ನಮ್ಮ ಹೋರಾಟ ಬಿಜೆಪಿ-ಶಿವಸೇನಾ ಮತ್ತು ಕಾಂಗ್ರೆಸ್-ಎನ್‌ಸಿಪಿ ವಿರುದ್ಧವಾಗಿತ್ತು. ಕಾಂಗ್ರೆಸ್-ಎನ್‌ಸಿಪಿ ಜತೆ ಮೈತ್ರಿಗೆ ಆರಂಭದಿಂದಲೂ ಮುಕ್ತ ಮನಸ್ಸು ಹೊಂದಿದ್ದೆ. ಆದರೆ ಅದೇಕೆ ಸಾಧ್ಯವಾಗಿಲ್ಲವೆಂಬುದನ್ನು ಅವರು ವಿವರಿಸಬೇಕು’’ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ಪ್ರಕಾಶ್ ಅಂಬೇಡ್ಕರ್ ಅವರ ಪಕ್ಷ ರಾಜ್ಯದಲ್ಲಿ ಕೇವಲ ಔರಂಗಾಬಾದ್ ಕ್ಷೇತ್ರದಲ್ಲಿ ಮಾತ್ರ ಜಯ ಗಳಿಸಿದ್ದರೂ ಮರಾಠವಾಡ ಪ್ರಾಂತ್ಯದ ನಂದೇಡ್, ಉಸ್ಮಾನಾಬಾದ್, ಪರ್ಭನಿ, ವಿದರ್ಭದ ಗಡ್ಚಿರೊಲಿ-ಚಿಮುರ್, ಪಶ್ಚಿಮ ಮಹಾರಾಷ್ಟ್ರದ ಸೋಲಾಪುರ್ ಹಾಗೂ ಹಟ್ಕನಂಗಲೆ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಎನ್‌ಸಿಪಿಯನ್ನು ಸೋಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ನಂದೇಡ್ ನಲ್ಲಿ ಚವಾಣ್ ಅವರು 42,000 ಮತಗಳ ಅಂತರದಲ್ಲಿ ಸೋತಿದ್ದರೆ, ಪ್ರಕಾಶ್ ಅಂಬೇಡ್ಕರ್ ಪಕ್ಷದ ಯಶಪಾಲ್ ಭಿಂಗೆ 1,64,000 ಮತಗಳನ್ನು ಗಳಿಸಿದ್ದರು. ಪರ್ಭನಿಯಲ್ಲಿ ಎನ್‌ಸಿಪಿಯ ರಾಜೇಶ್ ವಿಟೇಕರ್ 42,198 ಮತಗಳ ಅಂತರದಲ್ಲಿ ಸೋತರೆ ವಂಚಿತ್ ಬಹುಜನ್ ಅಘಡಿ ಪಕ್ಷದ ಆಲಂಗಿರ್ ಘಾನ್, 1,40,046 ಮತಗಳನ್ನು ಗಳಿಸಿದ್ದರು. ಅಚ್ಚರಿಯ ವಿಚಾರವೆಂದರೆ ಖಾನ್ ಅವರು ಹೈದರಾಬಾದ್ ನವರಾಗಿದ್ದು ಎಐಎಂಐಎಂಗೆ ಸೇರಿದವರು.

ಪ್ರಕಾಶ್ ಅಂಬೇಡ್ಕರ್ ಸ್ಪರ್ಧಿಸಿದ್ದ ಸೋಲಾಪುರ್ ನಲ್ಲಿ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಬಿಜೆಪಿಯ ಸ್ವಾಮಿ ಸಿದ್ದೇಶ್ವರ್ ವಿರುದ್ಧ 1,56,000 ಮತಗಳ ಅಂತರದಿಂದ ಸೋಲುಂಡಿದ್ದಾರೆ. ಇಲ್ಲಿ ಪ್ರಕಾಶ್ ಅಂಬೇಡ್ಕರ್ 1,68,694 ಮತಗಳನ್ನು, ಅಂದರೆ ಶೇ.15.7 ಮತಗಳನ್ನು ಪಡೆದಿದ್ದರು.

ಪ್ರಕಾಶ್ ಸ್ಪರ್ಧಿಸಿದ್ದ ಇನ್ನೊಂದು ಕ್ಷೇತ್ರವಾದ ಅಕೋಲಾದಲ್ಲಿ ಅವರಿಗೆ 2,77,522 ಮತಗಳು ದೊರಕಿದ್ದು, ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಅಂತರದಿಂದ ಇದು ಸ್ವಲ್ಪವೇ ಕಡಿಮೆಯಾಗಿದೆ.

ಔರಂಗಾಬಾದ್ ನಲ್ಲಿ ಪ್ರಕಾಶ್ ಅಂಬೇಡ್ಕರ್ ಪಕ್ಷದ ಅಭ್ಯರ್ಥಿ ಇಮ್ತಿಯಾಝ್ ಜಲೀಲ್ 5,000 ಮತಗಳಿಗೂ ಕಡಿಮೆ ಅಂತರದಿಂದ ಗೆದ್ದಿದ್ದಾರೆ. ಅವರಿಗೆ ಶೇ.32ರಷ್ಟು ಮತಗಳು ದೊರಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News