ಛತ್ತೀಸ್‌ಗಡದ 9 ಲೋಕಸಭಾ ಸ್ಥಾನಗಳಲ್ಲಿ ಅರಳಿದ ಕಮಲ

Update: 2019-05-24 15:08 GMT

ರಾಯ್‌ಪುರ, ಮೇ.24: ಆರು ತಿಂಗಳ ಹಿಂದೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಹೀನಾಯ ಸೋಲನ್ನು ಮರೆಮಾಚುವಂತೆ ಛತ್ತೀಸ್‌ಗಡದ ಹನ್ನೊಂದು ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಒಂಬತ್ತರಲ್ಲಿ ಜಯಭೇರಿ ಬಾರಿಸಿದೆ.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 15 ವರ್ಷಗಳ ಆಡಳಿತಕ್ಕೆ ಕೊನೆಹಾಡಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳಿಗಷ್ಟೇ ತೃಪ್ತಿ ಪಡಬೇಕಾಗಿದೆ. ಬಿಜೆಪಿ ಛತ್ತೀಸ್‌ಗಡದ ರಾಯ್‌ಪುರ, ದುರ್ಗ್, ರಜ್ನಂದನ್‌ಗಾಂವ್, ಬಿಲಾಸ್‌ಪುರ, ಸುರ್ಗುಜ(ಎಸ್ಟಿ), ರಾಯ್‌ಗಡ್ (ಎಸ್ಟಿ), ಜಂಜ್ಗಿರ್-ಚಂಪಾ (ಎಸ್ಸಿ), ಕಂಕೆರ್ (ಎಸ್ಟಿ) ಮತ್ತು ಮಹಸಮುಂಡ್ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಇದೇ ವೇಳೆ ಕಾಂಗ್ರೆಸ್ ಬಸ್ತರ್ ಮತ್ತು ಕೊರ್ಬ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲಷ್ಟೇ ಶಕ್ತವಾಗಿದೆ. 2004ರಿಂದೀಚೆಗಿನ ಮೂರೂ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಛತ್ತೀಸ್‌ಗಡದ 11 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ, ಏಳು ಬಾರಿಯ ಸಂಸದ ರಮೇಶ್ ಬೈಸ್, ಕೇಂದ್ರ ಸಚಿವ ವಿಷ್ಣುದೇವ್ ಸಾಯಿ ಮತ್ತು ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಪುತ್ರ ಅಭಿಷೇಕ್ ಸಿಂಗ್ ಸೇರಿದಂತೆ ಎಲ್ಲ ಹತ್ತು ಮಂದಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿತ್ತು. ಬಿಜೆಪಿ ನಾಯಕರ ಈ ಲೆಕ್ಕಾಚಾರ ಚುನಾವಣೆಯಲ್ಲಿ ಕೇಸರಿ ಪಡೆ ಲಾಭಗಳಿಸಲು ನೆರವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News