ದಿಲ್ಲಿ ಜನರ ಒಳಿತಿಗಾಗಿ ಪ್ರಧಾನಿ ಮೋದಿಗೆ ಸಹಕಾರ: ಕೇಜ್ರಿವಾಲ್

Update: 2019-05-24 16:05 GMT

ಹೊಸದಿಲ್ಲಿ, ಮೇ 24: ಜನಾದೇಶವನ್ನು ತಾವು ಸ್ವೀಕರಿಸಿದ್ದು ದಿಲ್ಲಿಯ ಜನತೆಯ ಒಳಿತಿಗಾಗಿ ಪ್ರಧಾನಿ ಮೋದಿ ಜತೆ ಕೆಲಸ ಮಾಡಲು ಸಿದ್ಧ ಎಂದು ದಿಲ್ಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

 ಲೋಕಸಭಾ ಚುನಾವಣೆಯಲ್ಲಿ ಚಾರಿತ್ರಿಕ ಗೆಲುವು ದಾಖಲಿಸಿದ್ದಕ್ಕಾಗಿ ಪ್ರಧಾನಿ ಮೋದಿಯನ್ನು ಅಭಿನಂದಿಸಿದ ಅವರು, ನಾವು ಅತ್ಯುತ್ತಮ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದೆವು. ನಮ್ಮ ಕಾರ್ಯಕರ್ತರೂ ಪ್ರಚಾರದ ಸಂದರ್ಭ ಭಾರೀ ಶ್ರಮಪಟ್ಟಿದ್ದಾರೆ. ಆದರೂ ಪಕ್ಷಕ್ಕೆ ಶೂನ್ಯ ಸಂಪಾದನೆಯಾಗಿರುವುದು ಬೇಸರ ತಂದಿದೆ ಎಂದವರು ಹೇಳಿದರು. ದಿಲ್ಲಿಯ 7 ಸಂಸದೀಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದ್ದರೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮೂರನೇ ಸ್ಥಾನಕ್ಕೆ ಕುಸಿದಿದೆ.

ಇದೇ ವೇಳೆ ಪಂಜಾಬ್‌ನ ಸಂಗ್ರೂರ್ ಸಂಸದೀಯ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಆಪ್ ಅಭ್ಯರ್ಥಿ ಭಗವಂತ್ ಮಾನ್‌ರನ್ನು ಕೇಜ್ರಿವಾಲ್ ಅಭಿನಂದಿಸಿದರು. ಮಾನ್ ಸಂಸತ್ತಿನಲ್ಲಿ ಜನತೆಯ ಪರವಾಗಿ ಧ್ವನಿ ಎತ್ತಲಿದ್ದಾರೆ ಎಂದವರು ಹೇಳಿದರು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಭಾರೀ ಮತಗಳ ಅಂತರದಿಂದ ಸೋತಿರುವುದು ಗಮನಾರ್ಹವಾಗಿದೆ. ಹೊಸದಿಲ್ಲಿ ಕ್ಷೇತ್ರದಲ್ಲಿ ಬೃಜೇಶ್ ಗೋಯಲ್ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ, ಚಾಂದ್ನಿ ಚೌಕ್ ಕ್ಷೇತ್ರದಿಂದ ಪಂಕಜ್ ಗುಪ್ತಾ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ, ದಕ್ಷಿಣ ದಿಲ್ಲಿ ಕ್ಷೇತ್ರದಿಂದ ರಾಘವ್ ಚಡ್ಡಾ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ, ವಾಯುವ್ಯ ದಿಲ್ಲಿ ಕ್ಷೇತ್ರದಿಂದ ಗಗನ್ ಸಿಂಗ್ 6 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ, ಆತಿಶಿ ಪೂರ್ವ ದಿಲ್ಲಿ ಕ್ಷೇತ್ರದಿಂದ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ, ಈಶಾನ್ಯ ದಿಲ್ಲಿ ಕ್ಷೇತ್ರದಿಂದ ದಿಲೀಪ್ ಪಾಂಡೆ 5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ, ಪಶ್ಚಿಮ ದಿಲ್ಲಿ ಕ್ಷೇತ್ರದಿಂದ ಬಲ್ಬೀರ್ ಸಿಂಗ್ ಜಾಖಡ್ 6 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲುಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News