ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಿಂದ ಪ್ರಮಾಣ ವಚನ ಸ್ವೀಕಾರ

Update: 2019-05-24 16:47 GMT

ಹೊಸದಿಲ್ಲಿ, ಮೇ 24: ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಿಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಶುಕ್ರವಾರ ಪ್ರಮಾಣ ವಚನ ಬೋಧಿಸಿದರು. ನಾಲ್ವರು ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಸಂಖ್ಯೆ ಪೂರ್ಣ ಸಂಖ್ಯಾ ಬಲ 31ಕ್ಕೆ ತಲುಪಿದೆ.

 ಸುಪ್ರೀಂ ಕೋರ್ಟ್‌ನ ಇತರ ಹಲವು ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ನ್ಯಾಯಾಲಯ ಸಂಖ್ಯೆ 1ರಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸೂರ್ಯಕಾಂತ್, ಅನಿರುದ್ಧ ಬೋಸ್ ಹಾಗೂ ಎ.ಎಸ್. ಬೋಪಣ್ಣ ಅವರಿಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಪ್ರಮಾಣ ವಚನ ಬೋಧಿಸಿದರು. ಇದುವರೆಗೆ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 27 ನ್ಯಾಯಮೂರ್ತಿಗಳಿಂದ ಸುಪ್ರೀಂ ಕೋರ್ಟ್‌ನ ಕಲಾಪ ನಡೆಯುತ್ತಿತ್ತು. 2008ರಲ್ಲಿ ಸಂಸತ್ತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಸಂಖ್ಯೆಯನ್ನು 26ರಿಂದ 31ಕ್ಕೆ ಏರಿಕೆ ಮಾಡಿದ ಬಳಿಕ ಮೊದಲ ಬಾರಿಗೆ ನ್ಯಾಯಮೂರ್ತಿಗಳ ಸಂಖ್ಯಾ ಬಲ ಪೂರ್ಣ ಸಂಖ್ಯಾ ಬಲಕ್ಕೆ ತಲುಪಿದೆ.

 ಗವಾಯಿ, ಕಾಂತ್, ಬೋಸ್ ಹಾಗೂ ಬೋಪಣ್ಣ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನಾಗಿ ನಿಯೋಜಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬುಧವಾರ ನಿರ್ದೇಶನ ನೀಡಿದ್ದರು. ಹಿರಿತನ ಹಾಗೂ ವಲಯದ ಪ್ರತಿನಿಧಿತ್ವವನ್ನು ಕಾರಣವಾಗಿ ಉಲ್ಲೇಖಿಸಿ ನ್ಯಾಯಮೂರ್ತಿಗಳಾದ ಬೋಸ್ ಹಾಗೂ ಬೋಪಣ್ಣ ಅವರ ಹೆಸರನ್ನು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಕೊಲೀಜಿಯಂಗೆ ಹಿಂದೆ ಕಳುಹಿಸಿತ್ತು.

ನ್ಯಾಯಮೂರ್ತಿಗಳಾದ ಬೋಸ್ ಹಾಗೂ ಬೋಪಣ್ಣ ಅವರಿಗೆ ಭಡ್ತಿ ನೀಡಲು ಸಾಮರ್ಥ್ಯ, ನಡತೆ ಅಥವಾ ಸಮಗ್ರತೆಗೆ ಸಂಬಂಧಿಸಿ ಪ್ರತಿಕೂಲವಾದ ಯಾವುದನ್ನೂ ನಾವು ಗಮನಿಸಿಲ್ಲ ಎಂದು ಮೇ 8ರಂದು ಐವರು ಸದಸ್ಯರ ಕೊಲೀಜಿಯಂ ತನ್ನ ನಿರ್ಧಾರದಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News