ಈ ಅಭ್ಯರ್ಥಿಯ ಆಸ್ತಿ ಮೌಲ್ಯ 1,107 ಕೋಟಿ ರೂ., ಪಡೆದ ಮತ 1,556 !

Update: 2019-05-24 17:47 GMT

ಹೊಸದಿಲ್ಲಿ, ಮೇ 24: ಲೋಕಸಭಾ ಚುನಾವಣೆಯಲ್ಲಿ ಸ್ವರ್ಧಿಸಿದ್ದ ಶ್ರೀಮಂತ ಅಭ್ಯರ್ಥಿಗಳಲ್ಲಿ ಐವರು ಜಯ ಗಳಿಸಿದ್ದರೆ, ಅದೇ ಸಂಖ್ಯೆಯ ಅಭ್ಯರ್ಥಿಗಳು ಸೋಲುಂಡಿದ್ದಾರೆ. ಬಿಹಾರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿರುವ ದೇಶದ ಅತಿ ಶ್ರೀಮಂತ ಅಭ್ಯರ್ಥಿ ರಮೇಶ್ ಕುಮಾರ್ ಶರ್ಮಾ ಠೇವಣಿ ಕಳೆದುಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.

 ದೇಶದ ಅತಿ ಶ್ರೀಮಂತ 10 ಅಭ್ಯರ್ಥಿಗಳಲ್ಲಿ ಮೂವರು ಆಂಧ್ರಪ್ರದೇಶ, ತಲಾ ಇಬ್ಬರು ಬಿಹಾರ್ ಹಾಗೂ ಮಧ್ಯಪ್ರದೇಶ, ತಲಾ ಒಂದು ತಮಿಳುನಾಡು, ಕರ್ನಾಟಕ ಹಾಗೂ ತೆಲಂಗಾಣದವರು. ಜಯ ಗಳಿಸಿದ ಪ್ರಮುಖರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್ ಅವರ ಪುತ್ರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಕುಲ್ ನಾಥ್ ಸೇರಿದ್ದರೆ, ಸೋತವರಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ಸೇರಿದ್ದಾರೆ ಎಂದು ಚುನಾವಣಾ ಆಯೋಗದ ದತ್ತಾಂಶ ತಿಳಿಸಿದೆ.

 ಬಿಹಾರದ ಪಾಟಲಿಪುತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀಮಂತ ಅಭ್ಯರ್ಥಿ ರಮೇಶ್ ಕುಮಾರ್ ಶರ್ಮಾ ಕೇವಲ 1,556 ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ. ರಮೇಶ್ ಶರ್ಮಾ ಅವರು ನಾಮಪತ್ರದಲ್ಲಿ 1,107 ಕೋಟಿ ರೂಪಾಯಿ ಸೊತ್ತು ಇರುವುದಾಗಿ ದಾಖಲಿಸಿದ್ದಾರೆ. ಬಿಹಾರದ ಪುರ್ನಿಯಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದೇಶದ 7ನೇ ಅತಿ ಶ್ರೀಮಂತ ವ್ಯಕ್ತಿ ಉದಯ್ ಸಿಂಗ್ 2,63,461 ಮತಗಳ ಅಂತರದಿಂದ ಸೋತಿದ್ದಾರೆ. 341 ಕೋಟಿ ರೂಪಾಯಿ ಸೊತ್ತು ಇರುವುದಾಗಿ ಅವರು ನಾಮಪತ್ರದಲ್ಲಿ ಘೋಷಿಸಿದ್ದಾರೆ.

 ಸೋತವರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊಂಡಾ ವಿಶ್ವೇಶ್ವರ ರೆಡ್ಡಿ ಸೇರಿದ್ದಾರೆ. ಅವರು ತೆಲಂಗಾಣದ ಚೆವೆಲ್ಲಾ ಲೋಕಸಭಾ ಕ್ಷೇತ್ರದಿಂದ ಮರು ಚುನಾವಣೆಯಲ್ಲಿ ಕಠಿಣ ಸ್ಪರ್ಧೆ ಒಡ್ಡಿದ್ದರು. ಆದರೆ, ತೆಲಂಗಾಣ ರಾಷ್ಟ್ರ ಸಮಿತಿ ಅಭ್ಯರ್ಥಿ ಜಿ. ರಂಜಿತ್ ರೆಡ್ಡಿ ಅವರಿಂದ 14,317 ಮತಗಳ ಅಂತರದಿಂದ ಸೋತಿದ್ದಾರೆ.

ಅಪೊಲ್ಲೊ ಸಮೂಹದ ಅಧ್ಯಕ್ಷ ಸಿ. ಪ್ರತಾಪ್ ರೆಡ್ಡಿ ಅವರ ಅಳಿಯ ವಿಶ್ವೇಶ್ವರ ದೇಶದ ಎರಡನೇ ಅತಿ ಶ್ರೀಮಂತ ಅಭ್ಯರ್ಥಿ. ಇವರ ಸೊತ್ತಿನ ಮೌಲ್ಯ 895 ಕೋಟಿ ರೂಪಾಯಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News