ಈ ಪಕ್ಷದಲ್ಲಿ ಶೇ. 42 ರಷ್ಟು ಮಹಿಳಾ ಸಂಸದರು !

Update: 2019-05-25 04:26 GMT

ಹೊಸದಿಲ್ಲಿ: ಲೋಕಸಭೆಯಲ್ಲಿ ನೂತನ 12 ಮಂದಿ ಬಿಜೆಡಿ ಸಂಸದರ ಪಾಳಯದಲ್ಲಿ ಈ ಬಾರಿ ಐದು ಮಂದಿ ಮಹಿಳೆಯರಿದ್ದು, ಶೇಕಡ 42ರಷ್ಟು ಸಂಸದರು ಮಹಿಳೆಯರಾಗಿದ್ದಾರೆ.

ಇದರಿಂದಾಗಿ ಗರಿಷ್ಠ ಪ್ರಮಾಣದ ಮಹಿಳಾ ಸಂಸದರನ್ನು ಹೊಂದಿರುವ ಪಕ್ಷ ಎಂಬ ಖ್ಯಾತಿಗೆ ಬಿಜು ಜನತಾದಳ ಪಾತ್ರವಾಗಿದೆ. 22 ಸಂಸದರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್‌ನಲ್ಲಿ ಕೂಡಾ ಒಂಬತ್ತು ಮಹಿಳೆಯರಿದ್ದು ಈ ಪಕ್ಷ ನಂತರದ ಸ್ಥಾನದಲ್ಲಿದೆ.
ಹದಿನೇಳನೇ ಲೋಕಸಭಾ ಚುನಾವಣೆಯ ಮತ್ತೊಂದು ಅಚ್ಚರಿ ಎಂದರೆ, ಪುರುಷ ಅಭ್ಯರ್ಥಿಗಳಿಗೆ ಹೋಲಿಸಿದರೆ ಸ್ಪರ್ಧಿಸಿದ ಮಹಿಳಾ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಅಧಿಕ.

ಉದಾಹರಣೆಗೆ ಬಿಜೆಪಿ 54 ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ನೀಡಿತ್ತು. ಈ ಪೈಕಿ 40 ಮಂದಿ ಗೆದ್ದಿದ್ದು, ಶೇಕಡ 74.1ರಷ್ಟು ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದಂತಾಗಿದೆ. ಇದೇ ಪಕ್ಷದಲ್ಲಿ ಪುರುಷ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಶೇಕಡ 68.8. ತೃಣಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಮಹಿಳಾ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಶೇಕಡ 52.9 ಇದ್ದು, ಇದು ಪುರುಷ ಅಭ್ಯರ್ಥಿಗಳ ಗೆಲುವಿನ ಪ್ರಮಾಣಕ್ಕಿಂತ ಅಧಿಕ.

ವೈಎಸ್‌ಆರ್ ಕಾಂಗ್ರೆಸ್ ಮತ್ತು ಡಿಎಂಕೆ ಕಣಕ್ಕಿಳಿಸಿದ ಎಲ್ಲ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಮಹಿಳಾ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಅತ್ಯಲ್ಪ. ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದ ಮಹಿಳೆಯರ ಪೈಕಿ ಶೇಕಡ 11.1ರಷ್ಟು ಮಹಿಳೆಯರು ಮಾತ್ರ ಯಶಸ್ಸು ಸಾಧಿಸಿದ್ದಾರೆ. ಇಲ್ಲಿ ಪುರುಷ ಅಭ್ಯರ್ಥಿಗಳ ಯಶಸ್ಸಿನ ಪ್ರಮಾಣ ಶೇಕಡ 12. 5.

ಈ ಬಾರಿ ಒಟ್ಟು 78 ಮಹಿಳೆಯರು ಸಂಸತ್ ಪ್ರವೇಶಿಸಿದ್ದು, ಈ ಪೈಕಿ 30ಕ್ಕೂ ಹೆಚ್ಚು ಮಂದಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಮಹಿಳೆಯರ ಪೈಕಿ ಮೇನಕಾಗಾಂಧಿ ಕನಿಷ್ಠ ಅಂದರೆ 14500 ಮತಗಳ ಅಂತರದಿಂದ ಗೆದ್ದಿದ್ದು, ವಡೋದರಾ ಕ್ಷೇತ್ರದಿಂದ ರಂಜನ್‌ಬೆನ್ ಭಟ್ 5,89,177 ಮತಗಳ ಅಂತರದಿಂದ ಗೆಲುವು ಸಾಧಿಸಿ ಗರಿಷ್ಠ ಅಂತರದ ಗೆಲುವು ಸಾಧಿಸಿದ ಮಹಿಳಾ ಸಂಸದೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಬಿಜೆಡಿ ಟಿಕೆಟ್‌ನಲ್ಲಿ ಕಿಯೋಂಜರ್ ಕ್ಷೇತ್ರದಿಂದ ಗೆದ್ದ 25 ವರ್ಷದ ಚಂದ್ರಾಣಿ ಮುರುಮು ಅತ್ಯಂತ ಕಿರಿಯ ಸಂಸದೆ ಎನಿಸಿಕೊಂಡಿದ್ದರೆ, ಪಾಟಿಯಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದ ಪ್ರಣೀತ್ ಕೌರ್ (74) ಅತ್ಯಂತ ಹಿರಿಯ ಸಂಸದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News