ಲೋಕಸಭೆ ಜಯಿಸಿದ ನಂತರ ಈಗ ಬಿಜೆಪಿ ದೃಷ್ಟಿ ರಾಜ್ಯಸಭೆಯ ಮೇಲೆ

Update: 2019-05-25 14:55 GMT

ಹೊಸದಿಲ್ಲಿ, ಮೇ.25: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ಸದ್ಯ ತನ್ನ ದೃಷ್ಟಿಯನ್ನು ರಾಜ್ಯಸಭೆಯ ಮೇಲಿಟ್ಟಿದೆ. ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತ ಇಲ್ಲದಿರುವುದು ಮೋದಿ ಸರಕಾರದ ಪ್ರಮುಖ ಕಾನೂನುಗಳನ್ನು ಜಾರಿ ಮಾಡಲು ತೊಡಕಾಗಿದೆ. ಈ ಸಮಸ್ಯೆಯಿಂದ ಹೊರಬರಲು ಎನ್‌ಡಿಎ ಯೋಜನೆ ರೂಪಿಸಲಿದೆ ಎಂದು ಆಂತರಿಕ ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲಿ ಅಗತ್ಯ ಬಹುಮತ ಇಲ್ಲದಿರುವ ಕಾರಣ ತ್ರಿವಳಿ ತಲಾಕ್, ಮೋಟಾರು ವಾಹನ ಕಾಯ್ದೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯಂತಹ ಎನ್‌ಡಿಎಯ ಪ್ರಮುಖ ಕಾನೂನುಗಳನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ಲೋಕಸಭೆಗೆ ಸಂಸದರನ್ನು ಜನರು ನೇರವಾಗಿ ಆಯ್ಕೆ ಮಾಡಿದರೆ ರಾಜ್ಯಸಭೆಗೆ ಸದಸ್ಯರನ್ನು ಶಾಸಕರು ಚುನಾಯಿಸುತ್ತಾರೆ. ಶಾಸಕರ ಸಂಖ್ಯೆ ಹೆಚ್ಚಿರುವ ಪಕ್ಷಕ್ಕೆ ಮೇಲ್ಮನೆಗೆ ಹೆಚ್ಚು ಸದಸ್ಯರನ್ನು ಕಳುಹಿಸುವ ಅವಕಾಶವಿರುತ್ತದೆ. ರಾಜ್ಯಸಭಾ ಸದಸ್ಯನ ಸೇವಾವಧಿ ಆರು ವರ್ಷಗಳಾದರೆ ಲೋಕಸಭಾ ಸದಸ್ಯ ಐದು ವರ್ಷಕ್ಕೊಮ್ಮೆ ಚುನಾವಣೆ ಎದುರಿಸಬೇಕಾಗುತ್ತದೆ. ಆದರೆ ರಾಜ್ಯಸಭೆಗೆ ಎಲ್ಲ ಸದಸ್ಯರನ್ನು ಒಟ್ಟಿಗೆ ಆಯ್ಕೆ ಮಾಡಲಾಗುವುದಿಲ್ಲ. 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಕಳೆದ ವರ್ಷ ಎನ್‌ಡಿಎ ಸದಸ್ಯ ಬಲ 101 ಆಗಿತ್ತು. ಜೊತೆಗೆ ನಾಮನಿರ್ದೇಶಿತ ಸದಸ್ಯರಾದ ಸ್ವಪನ್‌ದಾಸ್ ಗುಪ್ತಾ, ಮೇರಿ ಕೋಮ್ ಮತ್ತು ನರೇಂದ್ರ ಜಾಧವ್ ಹಾಗೂ ಇತರ ಮೂವರು ಸ್ವತಂತ್ರ ಸದಸ್ಯರ ಬೆಂಬಲವೂ ಅದಕ್ಕಿತ್ತು. ಆಮೂಲಕ ಎನ್‌ಡಿಎ ಸದಸ್ಯಬಲ 107ಕ್ಕೇರಿತ್ತು.

2020ರ ವೇಳೆಗೆ ಎನ್‌ಡಿಎ ಸರಕಾರ ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಗುಜರಾತ್ ಮತ್ತು ಮಧ್ಯ ಪ್ರದೇಶ ಸೇರಿದಂತೆ 14 ರಾಜ್ಯಗಳಿಂದ 19 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಬಹುಮತಕ್ಕೆ ಅಗತ್ಯವಿರುವ 123 ಸ್ಥಾನಗಳನ್ನು ದಾಟಿ 125ಕ್ಕೇರಲಿದೆ. ಈ ಸಾಧನೆಯಿಂದ ಕಳೆದ 15 ವರ್ಷಗಳಲ್ಲೇ ರಾಜ್ಯಸಭೆಯಲ್ಲಿ ಬಹುಮತ ತಲುಪಿದ ಮೊದಲ ಸರಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News