ಸಾಹಿತಿಗೆ ಅಸ್ಮಿತೆ ಮುಖ್ಯ: ಜಯಂತ್ ಕಾಯ್ಕಿಣಿ

Update: 2019-05-25 16:09 GMT

ಮಂಗಳೂರು, ಮೇ 25: ನನ್ನ ತಂದೆ ಗೌರೀಶ್ ಕಾಯ್ಕಿಣಿ ಸಾಹಿತಿ. ಸಾಹಿತಿಯ ಪುತ್ರ ಸಾಹಿತಿಯಾಗಬಹುದು. ಆದರೆ ಸಾಹಿತಿಯು ತನ್ನದೇಯಾದ ಅಸ್ಮಿತೆಯನ್ನು ಬೆಳೆಸಿಕೊಳ್ಳುವುದು ಮುಖ್ಯ ಎಂದು ಸಾಹಿತಿ, ಬರಹಗಾರ, ಕಥೆಗಾರ ಜಯಂತ್ ಕಾಯ್ಕಿಣಿ ಪ್ರತಿಪಾದಿಸಿದ್ದಾರೆ.

ಕವಿತಾ ಟ್ರಸ್ಟ್ ಹಾಗೂ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಶನಿವಾರ ನಡೆದ ‘ಕವಿತಾ ಗಝಲಿ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾನು ಚಿಕ್ಕವನಿದ್ದಾಗ ತಂದೆ ಸಾಹಿತಿ ಗೌರೀಶ್ ಕಾಯ್ಕಿಣಿ ಅವರನ್ನು ಮಾತನಾಡಿಸಲು ಪ್ರತಿದಿನ ನೂರಾರು ಮಂದಿ ಬರುತ್ತಿದ್ದರು. ಸಾಹಿತಿಯ ಮಗ ಸಾಹಿತಿಯಾಗುತ್ತಾನೆ. ನೀನೂ ಸಾಹಿತಿಯಾಗು ಎಂದು ಹಲವರು ದುಂಬಾಲು ಬೀಳುತ್ತಿದ್ದರು. ಆಗ ನನಗದರಲ್ಲಿ ವಿಶೇಷವೆನಿಸಲಿಲ್ಲ. ಆದರೆ ಬರವಣಿಗೆ ಶುರು ಮಾಡಿದಾಗಲೇ ತಿಳಿಯಿತು ತಂದೆಯ ಬರಹ ಶೈಲಿಯನ್ನು ನಕಲು ಮಾಡದೇ ನನ್ನದೇಯಾದ ಶೈಲಿಯ ಬರಹ ಆರಂಭಿಸಬೇಕು ಎನ್ನುವುದು. ತಕ್ಷಣವೇ ತಿದ್ದಿಕೊಂಡೆ ಎಂದು ತಮ್ಮ ನೆನಪುಗಳನ್ನು ಪ್ರೇಕ್ಷಕರಲ್ಲಿ ಗರಿಗರಿಯಾಗಿ ಬಿಚ್ಚಿಟ್ಟರು.

ಮುಂಬೈ ಒಂದು ಬೃಹತ್ ಮಹಾನಗರ. ಕನಸಿನ ನಗರವೆಂದರೆ ಉತ್ಪ್ರೇಕ್ಷೆಯಾಗಲಾರದು. ಮುಂಬೈನಲ್ಲಿರುವವರು ಸರಳ ಜೀವಿಗಳು. ನಾನು ಅಲ್ಲಿದ್ದ 23 ವರ್ಷಗಳ ಸವಿನೆನಪುಗಳು ಇನ್ನು ಎದೆಯಲ್ಲಿ ಹಸಿಯಾಗಿಯೇ ಉಳಿದಿವೆ. ನನಗೆ ಬರವಣಿಗೆಯನ್ನು ಹಿಡಿಹಿಡಿಯಾಗಿ ಎದೆಗಿಳಿಸಿದ್ದು ಧಾರವಾಡವಾದರೆ, ಬದುಕು ರೂಪಿಸಿದ್ದು ಅದೇ ಬೃಹತ್ ಮುಂಬೈ. ಅಲ್ಲಿನ ರಸ್ತೆಗಳು, ರಸ್ತೆ ಪಕ್ಕದ ಧೂಳು, ಬೀದಿಬದಿಯ ವ್ಯಾಪಾರಸ್ಥರು, ಪರಿಸರ ಸೇರಿದಂತೆ ಮುಂಬೈನ ಗಲ್ಲಿಗಲ್ಲಿಗಳು ಹೇಳುವ ಪಾಠಗಳನ್ನು ಪ್ರೇಕ್ಷಕರಿಗೆ ಕಟ್ಟಿಕೊಟ್ಟರು.

ಮುಂಬೈನಲ್ಲಿ ನನಗೆ ಇಲ್ಲಿಯವರೆಗೂ ನನ್ನ ಜಾತಿ, ಉದ್ಯೋಗ, ಸಂಪಾದನೆ, ಯಾವ ತೆರನಾದ ಬರಹ, ಹುಟ್ಟೂರು (ಗೋಕರ್ಣ) ಗಳ ಬಗ್ಗೆ ವಿಚಾರಿಸುವುದಿಲ್ಲ. ಅಲ್ಲಿಯದ್ದು ಸರಳಜೀವಿಗಳ ಸರಳ ಬದುಕು. ಎಂತಹ ವ್ಯಕ್ತಿ ಇದ್ದರೂ ಏಕವಚನದಿಂದಲೇ ಮಾತಿಗಿಳಿಯುತ್ತಾರೆ. ಆ ಮಾತಿನಲ್ಲಿ ಸಿಹಿಮುತ್ತುಗಳೇ ಉದುರುತ್ತಿರುತ್ತವೆ ಎಂದು ಮುಂಬೈ ಜತೆಗಿನ ತನ್ನ ಬಾಂಧವ್ಯವನ್ನು ಪ್ರೇಕ್ಷಕರ ಜತೆ ಹಂಚಿಕೊಂಡರು.
‘ಇಂಕ್ ಆಫ್ ಡಿಸೆಂಟ್’ ಕೃತಿಯ ಕರ್ತೃ, ಕೊಂಕಣಿ ಲೇಖಕ ದಾಮೋದರ್ ವೌರೊ ಅವರು ತಮ್ಮ ಸಾಹಿತ್ಯಕ ಬದುಕನ್ನು ಸಭಿಕರಲ್ಲಿ ತೆರೆದಿಟ್ಟರು.

ಇದಕ್ಕೂ ಮೊದಲು ನಡೆದ ಕವನ ವಾಚನ ಕಾರ್ಯಕ್ರಮದಲ್ಲಿ ಮುಂಬೈನ ಸಾಹಿತಿ ರಾಜಾ ರಾವ್ ಜ್ಯೂನಿಯರ್, ಕೊಂಕಣಿ ಲೇಖಕ ಎಚ್.ಎಂ.ಪೆರ್ನಾಲ್, ಸಾಹಿತಿ ವಿಲ್ಸನ್ ಕಟೀಲ್ ಸ್ವರಚಿತ ಕವನಗಳನ್ನು ವಾಚಿಸಿ, ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಕವಿ ಆರಿಫ್ ರಾಜಾ ಅವರ ಕವನಗಳನ್ನು ಜೈಸನ್ ಸಿಕ್ವೇರಾ ವಾಚಿಸಿದರು. ಲೇಖಕ ವಿಲಿಯಂ ಪೈಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News