ದೇಶದಲ್ಲಿ ಆಡಳಿತ ಪರ ಅಲೆಯಿತ್ತು: ಪ್ರಧಾನಿ ಮೋದಿ

Update: 2019-05-25 16:50 GMT

ಹೊಸದಿಲ್ಲಿ,ಮೇ 25: ದೇಶದಲ್ಲಿ ಆಡಳಿತ ಪರ ಅಲೆಯಿತ್ತು ಎಂದು ಶನಿವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವಾಸ ಜನತೆ ಮತ್ತು ಸರಕಾರದ ನಡುವೆ ಮಾತ್ರವೇ ಅಲ್ಲ,ಜನತೆಯ ನಡುವೆಯೂ ಇದೆ ಎಂದು ಹೇಳಿದರು. ಅವರು ಎನ್‌ಡಿಎ ಸಂಸದೀಯ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾದ ಬಳಿಕ ನೂತನ ಸಂಸದರನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಲೋಕಸಭೆಗೆ ಮಹಿಳಾ ಸದಸ್ಯರು ಆಯ್ಕೆಯಾಗಿದ್ದಾರೆ ಎಂದ ಮೋದಿ, ಅವರ ಸ್ವಂತ ಶಕ್ತಿಯಿಂದಾಗಿ ಮಾತ್ರ ಇಂತಹುದು ಸಾಧ್ಯವಾಗುತ್ತದೆ ಎಂದೂ ತಿಳಿಸಿದರು.

ಇದಕ್ಕೂ ಮುನ್ನ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಪ್ರಕಾಶ ಸಿಂಗ್ ಬಾದಲ್ ಅವರು ಸಂಸದೀಯ ಪಕ್ಷದ ನಾಯಕನ ಸ್ಥಾನಕ್ಕೆ ಮೋದಿಯರ ಹೆಸರನ್ನು ಸೂಚಿಸಿದರೆ,ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎಲ್‌ಜೆಪಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ ಠಾಕ್ರೆ ಅವರು ಅನುಮೋದಿಸಿದರು.

ಎಲ್ಲ ಚುನಾಯಿತ ಸದಸ್ಯರನ್ನು ಎನ್‌ಡಿಎ ಸಂಸದೀಯ ಪಕ್ಷದ ಸಭೆಗೆ ಸ್ವಾಗತಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನರೇಂದ್ರ ಮೋದಿಯವರನ್ನು ಭಾರತದ ನೂತನ ಪ್ರಧಾನಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಗೃಹಸಚಿವ ರಾಜನಾಥ ಸಿಂಗ್,ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರೂ ಮೋದಿಯವರ ಆಯ್ಕೆಯನ್ನು ಸ್ವಾಗತಿಸಿ,ಅವರನ್ನು ಅಭಿನಂದಿಸಿದರು.

ಮೋದಿ ಅವರು ಸಭೆಯಲ್ಲಿ ಉಪಸ್ಥಿತರಿದ್ದ ಪಕ್ಷದ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರ ಆಶೀರ್ವಾದಗಳನ್ನು ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News