ಭಾರತ ಎಂದರೆ ಕೇವಲ ಹಿಂದಿ ಭಾಷಿಕ ರಾಜ್ಯಗಳಲ್ಲ: ಬಿಜೆಪಿಗೆ ಸ್ಟಾಲಿನ್ ಸಂದೇಶ

Update: 2019-05-25 17:20 GMT

ಚೆನ್ನೈ, ಮೇ.25: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರಕ್ಕೆ ಎಚ್ಚರಿಕೆ ರವಾನಿಸಿರುವ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಮುಖ್ಯಸ್ಥ ಎಂ.ಕೆ ಸ್ಟಾಲಿನ್, ಭಾರತ ಎಂದರೆ ಕೇವಲ ಹಿಂದಿ ಭಾಷಿಕ ರಾಜ್ಯಗಳಲ್ಲ. ಮುಂದಿನ ದಿನಗಳಲ್ಲಿ ರಚನಾತ್ಮಕ ರಾಜಕೀಯವೇ ಮುಖ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕೊನೆಯಾದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ 38 ಲೋಕಸಭಾ ಸ್ಥಾನಗಳ ಪೈಕಿ 37ರಲ್ಲಿ ಗೆಲುವು ಸಾಧಿಸುವ ಮೂಲಕ ಡಿಎಂಕೆ ಪ್ರಚಂಡ ಜಯಭೇರಿ ಬಾರಿಸಿದೆ. ವೆಲ್ಲೋರ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಅಕ್ರಮ ನಗದು ಪತ್ತೆಯಾದ ಕಾರಣ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.

ಮುಂದಿನ ದಿನಗಳಲ್ಲಿ ರಾಜ್ಯ ಕೇಂದ್ರಿತ ರಚನಾತ್ಮಕ ರಾಜಕೀಯ ಅಸ್ತಿತ್ವಕ್ಕೆ ಬರಲಿದೆ. ಕೇಂದ್ರದ ಯಾವುದೇ ಸರಕಾರ ಯಾವುದೇ ರಾಜ್ಯವನ್ನು ನಿರ್ಲಕ್ಷಿಸುವಂತಿಲ್ಲ. ಕೇವಲ ಹಿಂದಿ ಭಾಷಿಕ ರಾಜ್ಯಗಳೇ ಭಾರತ ಎಂಬ ದಿನಗಳು ಕಳೆದುಹೋಗಿವೆ. ಇದು ಎಲ್ಲ ರಾಜ್ಯಗಳನ್ನು ಜೊತೆಯಾಗಿ ಕೊಂಡೊಯ್ಯುವ ಕಾಲ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಡಿಎಂಕೆ ಅದ್ಭುತ ಗೆಲುವು ಸಾಧಿಸಿದ್ದರೂ ಅದರ ರಾಷ್ಟ್ರೀಯ ಮಿತ್ರಪಕ್ಷ ಕಾಂಗ್ರೆಸ್ ಇತರ ರಾಜ್ಯಗಳಲ್ಲಿ ಕಳಪೆ ಸಾಧನೆ ಮಾಡಿರುವುದರಿಂದ ಡಿಎಂಕೆ ಕಾರ್ಯರ್ತರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸ್ಟಾಲಿನ್ ಈ ಹೇಳಿಕೆಯನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News