ಗೋರಕ್ಷಕರಿಂದ ಅಮಾಯಕರ ಮೇಲೆ ಹಲ್ಲೆ ಆಘಾತಕಾರಿ: ಮೆಹಬೂಬ ಮುಫ್ತಿ

Update: 2019-05-25 17:20 GMT

ಶ್ರೀನಗರ,ಮೇ 25: ಇಬ್ಬರು ವ್ಯಕ್ತಿಗಳನ್ನು ಥಳಿಸಿರುವ ಶಂಕಿತ ಗೋರಕ್ಷಕರ ವಿರುದ್ಧ ಮಧ್ಯಪ್ರದೇಶ ಸರಕಾರವು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಶನಿವಾರ ಆಶಯ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶದ ಸಿಯೋನಿಯಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಶಂಕಿತ ಗೋರಕ್ಷಕರು ಇಬ್ಬರನ್ನು ದೊಣ್ಣೆಗಳಿಂದ ಥಳಿಸಿದ್ದು,ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಥಳಿತದ ದೃಶ್ಯಗಳಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

 ‘‘ಗೋರಕ್ಷಕರು ಇಷ್ಟೊಂದು ನಿರ್ಭೀತಿಯಿಂದ ಅಮಾಯಕ ಮುಸ್ಲಿಮರನ್ನು ಥಳಿಸುತ್ತಿರುವ ದೃಶ್ಯ ಕಂಡು ಆಘಾತವಾಗಿದೆ. ಈ ಗೂಂಡಾಗಳ ವಿರುದ್ಧ ಸರಕಾರವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆಶಿಸಿದ್ದೇನೆ’’ ಎಂದು ಮುಫ್ತಿ ಟ್ವೀಟಿಸಿದ್ದಾರೆ. ಇದು ಆರಂಭವಷ್ಟೇ ಎಂದು ಹೇಳಿರುವ ಜಮ್ಮು-ಕಾಶ್ಮೀರದ ಇನ್ನೋರ್ವ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ,ಭವಿಷ್ಯದಲ್ಲಿ ಇನ್ನಷ್ಟು ಕೆಟ್ಟದ್ದು ಕಾದಿದೆ ಎಂದು ಭೀತಿ ವ್ಯಕ್ತಪಡಿಸಿದ್ದಾರೆ.

‘ಇಬ್ತೆದಾಯೆ ಇಷ್ಕ್ ಹೈ ರೋತಾ ಹೈ ಕ್ಯಾ,ಆಗೆ ಆಗೆ ದೇಖಿಯೆ ಹೋತಾ ಹೈ ಕ್ಯಾ’ ಎಂಬ 18ನೇ ಶತಮಾನದ ಉರ್ದು ಕವಿ ಮಿರ್ ತಾಕಿ ಮಿರ್ ಅವರ ಕವನದ ಸಾಲುಗಳನ್ನು ಅಬ್ದುಲ್ಲಾ ಟ್ವೀಟಿಸಿದ್ದಾರೆ.

ಹಲ್ಲೆಗೊಳಗಾದವರು ತಮ್ಮ ಜೊತೆಯಲ್ಲಿದ್ದ ಮಹಿಳೆಗೆ ಚಪ್ಪಲಿಯಿಂದ ಥಳಿಸುವಂತೆಯೂ ಐವರು ಗೋರಕ್ಷಕರ ಗುಂಪು ಮಾಡಿತ್ತು ಎಂದು ತಿಳಿಸಿದ ಪೊಲೀಸ್ ಅಧಿಕಾರಿಯೋರ್ವರು,ಮಧ್ಯಪ್ರದೇಶದಲ್ಲಿ ಗೋಮಾಂಸವನ್ನು ಹೊಂದಿರುವುದು ಮತ್ತು ಸಾಗಿಸುವುದು ಅಪರಾಧವಾಗಿರುವುದರಿಂದ ಹಲ್ಲೆಗೊಳಗಾದ ಮೂವರನ್ನು ಬಂಧಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News