ಚುನಾವಣಾ ಆಯೋಗದಿಂದ ರಾಷ್ಟ್ರಪತಿಗೆ ಚುನಾಯಿತ ಅಭ್ಯರ್ಥಿಗಳ ಪಟ್ಟಿ ಸಲ್ಲಿಕೆ

Update: 2019-05-25 17:27 GMT

ಹೊಸದಿಲ್ಲಿ,ಮೇ 25: ಚುನಾವಣಾ ಆಯೋಗವು ನೂತನವಾಗಿ ಆಯ್ಕೆಯಾಗಿರುವ ಸಂಸದರ ಪಟ್ಟಿಯನ್ನು ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಸಲ್ಲಿಸುವ ಮೂಲಕ 17ನೇ ಲೋಕಸಭೆ ರಚನೆ ಪ್ರಕ್ರಿಯೆಗೆ ಚಾಲನೆ ನೀಡಿದೆ.

 ಮುಖ್ಯ ಚುನಾವಣಾ ಆಯುಕ್ತ ಸುನಿಲ ಅರೋರಾ ಮತ್ತು ಚುನಾವಣಾ ಆಯುಕ್ತರಾದ ಅಶೋಕ ಲವಾಸಾ ಹಾಗೂ ಸುಶೀಲಚಂದ್ರ ಅವರನ್ನೊಳಗೊಂಡ ಪೂರ್ಣ ಚುನಾವಣಾ ಆಯೋಗವು ರಾಷ್ಟ್ರಪತಿಗಳನ್ನು ಭೇಟಿಯಾಗಿ ನೂತನ ಸದಸ್ಯರ ಹೆಸರುಗಳನ್ನೊಳಗೊಂಡಿರುವ ಆಯೋಗದ ಅಧಿಸೂಚನೆಯ ಪ್ರತಿಯನ್ನು ಸಲ್ಲಿಸಿತು ಎಂದು ರಾಷ್ಟ್ರಪತಿ ಭವನವು ಹೇಳಿಕೆಯಲ್ಲಿ ತಿಳಿಸಿದೆ.

ಆಯೋಗದ ಅಧಿಸೂಚನೆಯು ನೂತನ ಲೋಕಸಭೆಯ ರಚನೆಗೆ ಚಾಲನೆ ನೀಡಿದರೆ,ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಪಟ್ಟಿಯು ಅವರು ಸರಕಾರ ರಚನೆ ಪ್ರಕ್ರಿಯೆಯನ್ನು ವಿಧ್ಯುಕ್ತವಾಗಿ ಆರಂಭಿಸಲು ಸಾಧ್ಯವಾಗಿಸುತ್ತದೆ.

ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರನ್ನು ಅಭಿನಂದಿಸಿದರು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಆಯೋಗ,ಸರಕಾರಿ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗಳು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕೋಟ್ಯಂತರ ಮತದಾರರನ್ನು ರಾಷ್ಟ್ರಪತಿಗಳು ಪ್ರಶಂಸಿಸಿದರು ಎಂದು ಹೇಳಿಕೆಯು ತಿಳಿಸಿದೆ.

16ನೇ ಲೋಕಸಭೆ ವಿಸರ್ಜನೆ

ಇದಕ್ಕೂ ಮುನ್ನ,ಕೆೇಂದ್ರ ಸಂಪುಟದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ 16ನೇ ಲೋಕಸಭೆಯನ್ನು ವಿಸರ್ಜಿಸಿದ್ದಾರೆ ಎಂದು ರಾಷ್ಟ್ರಪತಿ ಭವನವು ಹೇಳಿಕೆಯಲ್ಲಿ ತಿಳಿಸಿತು.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಂಪುಟ ಸಭೆಯು ಲೋಕಸಭೆ ವಿಸರ್ಜನೆಗೆ ಶಿಫಾರಸು ಮಾಡಿತ್ತು.

ಮೋದಿ ಮತ್ತು ಅವರ ಸಂಪುಟ ಸದಸ್ಯರ ರಾಜೀನಾಮೆಗಳನ್ನು ಶುಕ್ರವಾರ ಅಂಗೀಕರಿಸಿದ್ದ ರಾಷ್ಟ್ರಪತಿಗಳು,ನೂತನ ಸರಕಾರ ರಚನೆಯಾಗುವವರೆಗೆ ಉಸ್ತುವಾರಿ ಆಡಳಿತವನ್ನು ಮುಂದುವರಿಸುವಂತೆ ಸೂಚಿಸಿದ್ದರು.

ಮೋದಿ ಅವರು ಮುಂದಿನ ವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News