ಪ.ಬಂಗಾಳದಲ್ಲಿ ನಿಲ್ಲದ ಹಿಂಸಾಚಾರ: ಘರ್ಷಣೆಯಲ್ಲಿ ಗುಂಡಿಟ್ಟು ಯುವಕನ ಹತ್ಯೆ

Update: 2019-05-25 17:32 GMT

ಕೋಲ್ಕತಾ,ಮೇ 25: ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಮುಗಿದರೂ ಹಿಂಸಾಚಾರ ನಿಂತಿಲ್ಲ. ಶುಕ್ರವಾರ ರಾತ್ರಿ ನಾದಿಯಾ ಜಿಲ್ಲೆಯ ಚಕ್‌ದಾಹ ಎಂಬಲ್ಲಿ 23ರ ಹರೆಯದ ಯುವಕನೋರ್ವನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಇದು ಚುನಾವಣಾ ಫಲಿತಾಂಶ ಪ್ರಕಟನೆಯ ನಂತರದ ಘರ್ಷಣೆಗಳ ಫಲಶ್ರುತಿಯಾಗಿದೆ ಎಂದು ಶಂಕಿಸಲಾಗಿದೆ.

ಮೃತ ಯುವಕ ತನ್ನ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಬಿಜೆಪಿಯು ಶನಿವಾರ ಬೆಳಿಗ್ಗೆ ಪ್ರದೇಶದಲ್ಲಿ ಹಲವಾರು ಗಂಟೆಗಳ ಕಾಲ ರಸ್ತೆ ಮತ್ತು ರೈಲು ಸಂಚಾರಕ್ಕೆ ತಡೆಯೊಡ್ಡಿ ಯುವಕನ ಹಂತಕರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿತು.

ಅತ್ತ ತೃಣಮೂಲ ಪಕ್ಷವೂ ಮೃತ ಯುವಕ ತನ್ನ ಕಾರ್ಯಕರ್ತನೆಂದು ಹೇಳಿಕೊಂಡಿದ್ದು, ಆತನನ್ನು ಬಿಜೆಪಿಯು ಹತ್ಯೆಗೈದಿದೆ ಎಂದು ಆರೋಪಿಸಿದೆ.

ಚಿನ್ನದ ಕೆಲಸಗಾರನಾಗಿದ್ದ ಸಂತು ಘೋಷ್ ಶುಕ್ರವಾರ ಸಂಜೆ ತನ್ನ ಫೋನ್‌ಗೆ ಕರೆ ಬಂದ ಬೆನ್ನಿಗೇ ಮನೆಯಿಂದ ಹೊರಗೆ ಬಿದ್ದಿದ್ದ. ಮನೆಗೆ ಸಮೀಪವೇ ಹೊಲವೊಂದರಲ್ಲಿ ದುಷ್ಕರ್ಮಿಗಳು ಆತನನ್ನು ಗುಂಡಿಟ್ಟು ಕೊಲೆ ಮಾಡಿದ್ದು,ರಾತ್ರಿ ಶವ ಪತ್ತೆಯಾಗಿತ್ತು.

 ಸಂತು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದ ಮತ್ತು ಆತ ಯಾವುದೇ ರೀತಿಯ ರಾಜಕೀಯದಲ್ಲಿ ತೊಡಗಿಕೊಂಡಿರಲಿಲ್ಲ ಎಂದು ಕುಟುಂಬವು ಹೇಳಿದೆ.

ಸಂತುವಿನ ಬಲಿ ಚುನಾವಣಾ ಫಲಿತಾಂಶ ಘೋಷಣೆಯ ಬಳಿಕ ಹಿಂಸಾಚಾರದಿಂದ ಬಹುಶಃ ಮೊದಲ ಸಾವಾಗಿದ್ದು,ರಾಜ್ಯಾದ್ಯಂತ ತೃಣಮೂಲ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿರುವುದು ವರದಿಯಾಗಿದೆ.

 ಶುಕ್ರವಾರ ಕೂಚ್‌ಬೆಹಾರ್ ಜಿಲ್ಲೆಯಲ್ಲಿ ತೃಣಮೂಲ ಕಚೇರಿಯನ್ನು ನೆಲಸಮಗೊಳಿಸಲಾಗಿದ್ದರೆ,ಶನಿವಾರ ಬೆಳಿಗ್ಗೆ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿಯೂ ತೃಣಮೂಲ ಕಚೇರಿಗಳ ಮೇಲೆ ದಾಳಿಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News