"ನನಗೆ ಕುರ್ಚಿಯ ಹಂಬಲ ಇಲ್ಲ... ಆದರೆ ಅದಕ್ಕೆ ನನ್ನ ಅಗತ್ಯವಿದೆ..."
ಕೊಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಲಾಭವಾದ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಪಕ್ಷದ ಮುಖ್ಯಸ್ಥೆಯಾಗಿ ಪಕ್ಷದ ಪುನಶ್ಚೇತನಕ್ಕೆ ಒತ್ತು ನೀಡಲು ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ. ಆದರೆ ಪಕ್ಷದ ಸಹೋದ್ಯೋಗಿಗಳು ಇವರ ರಾಜೀನಾಮೆ ಪ್ರಸ್ತಾವವನ್ನು ತಿರಸ್ಕರಿಸಿದರು ಎಂದು ತಿಳಿದುಬಂದಿದೆ.
ಚುನಾವಣಾ ಫಲಿತಾಂಶದ ಪರಾಮರ್ಶೆ ನಡೆಸಲು ಕರೆದಿದ್ದ ಸಭೆಯಲ್ಲಿ ಮಮತಾ, "ನನಗೆ ಕುರ್ಚಿಯ ಹಂಬಲ ಇಲ್ಲ. ಆದರೆ ಕುರ್ಚಿಗೆ ನನ್ನ ಅಗತ್ಯವಿದೆ" ಎಂದು ಹೇಳಿದರು.
ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಮಮತಾ, ಭಾವುಕರಾಗಿ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಪರಿಣಾಮದ ಪರಾಮರ್ಶೆ ನಡೆಸಿದರು ಎಂದು ಉನ್ನತ ಮೂಲಗಳು ಹೇಳಿವೆ.
ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಎಲ್ಲ ಭರವಸೆಗಳನ್ನು ಈಡೇರಿಸಿದ್ದರೂ, ರಾಜ್ಯದ ಮತದಾರರು ವಿಶ್ವಾಸದ್ರೋಹ ಎಸಗಿದ್ದಾರೆ ಎಂಬ ಭಾವನೆ ಟಿಎಂಸಿ ಮುಖಂಡರಲ್ಲಿ ದಟ್ಟವಾಗಿದೆ. "ನಾನು ಮಾಡಬೇಕಾದ್ದಕ್ಕಿಂತ ಹೆಚ್ಚಿನದಲ್ಲೇ ನಾನು ಸಾಧಿಸಿದ್ದೇನೆ. ಇದೀಗ ನಾನು ಪಕ್ಷಕ್ಕೆ ಹೆಚ್ಚಿನ ಸಮಯ ನೀಡುತ್ತೇನೆ" ಎಂದು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.
ಅಲ್ಪಸಂಖ್ಯಾತರ ಓಲೈಕೆ ಆರೋಪದ ಬಗ್ಗೆ ನೇರ ಪ್ರಸ್ತಾಪ ಮಾಡಿದ ಮಮತಾ, "ನನಗೆ ಆಹ್ವಾನ ನೀಡಿದರೆ ನಾನು ಇಫ್ತಾರ್ ಕೂಟಗಳಲ್ಲಿ ಪಾಲ್ಗೊಳ್ಳುತ್ತೇನೆ. ಇದು ಮುಸ್ಲಿಮರ ಓಲೈಕೆ ಎಂದಾದರೂ ನಾನದನ್ನು ಮಾಡುತ್ತೇನೆ. ಎಲ್ಲಿಯವರೆಗೆ ಹಸು ಹಾಲು ಕೊಡುತ್ತದೆಯೋ ಅಲ್ಲಿಯವರೆಗೆ ಹಸು ಒದೆಯುವುದನ್ನು ನಾನು ಸಹಿಸಿಕೊಳ್ಳುತ್ತೇನೆ" ಎಂದು ಮಾರ್ಮಿಕವಾಗಿ ನುಡಿದರು.
ಪಕ್ಷದ ಕೆಲ ಮುಖಂಡರು ಹಣ ಪಡೆದು ಪಕ್ಷಕ್ಕೆ ವಿಶ್ವಾಸದ್ರೋಹ ಎಸಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ ಎಂದೂ ಮಮತಾ ಹೇಳಿರುವುದಾಗಿ ತಿಳಿದುಬಂದಿದೆ. ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.