×
Ad

"ಪಕ್ಷದ ಹಿತಾಸಕ್ತಿಗಿಂತ ಮಕ್ಕಳ ಹಿತಾಸಕ್ತಿಯೇ ಮುಖ್ಯವಾಯಿತು": ಪಕ್ಷದ ಹಿರಿಯರ ವಿರುದ್ಧ ರಾಹುಲ್ ಅಸಮಾಧಾನ

Update: 2019-05-26 10:09 IST

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜೀನಾಮೆಯನ್ನು ತಿರಸ್ಕರಿಸಿದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ಪಕ್ಷದ ಹಿರಿಯ ಮುಖಂಡರ ವಿರುದ್ಧ ಕಿಡಿ ಕಾರಿದ ಅಂಶ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶ ಸಿಎಂ ಕಮಲ್‌ ನಾಥ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಪಕ್ಷದ ಹಿತಾಸಕ್ತಿಗಿಂತ ಮಕ್ಕಳ ಹಿತಾಸಕ್ತಿಯೇ ಮುಖ್ಯವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಪಕ್ಷದ ಹೀನಾಯ ಸೋಲಿನ ಪರಾಮರ್ಶೆ ನಡೆಸಿದ ಈ ಸಭೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರು ತಮ್ಮ ಮಕ್ಕಳಿಗೆ ಟಿಕೆಟ್ ನೀಡುವಂತೆ ಒತ್ತಡ ತಂದ ಬಗ್ಗೆ ರಾಹುಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಳೀಯ ಮುಖಂಡರನ್ನು ಬೆಳೆಸಬೇಕು ಎಂದು ಜ್ಯೋತಿರಾದಿತ್ಯ ಸಿಂಧಿಯಾ ವಾದಿಸಿದ ಸಂದರ್ಭದಲ್ಲಿ ರಾಹುಲ್, ಹಿರಿಯ ಮುಖಂಡರ ಬಗ್ಗೆ ಕಿಡಿ ಕಾರಿದರು.

ಕಾಂಗ್ರೆಸ್ ಅಧಿಕಾರದಲ್ಲಿರುವ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಪಕ್ಷದ ಕಳಪೆ ಸಾಧನೆಯನ್ನು ಉಲ್ಲೇಖಿಸಿದ ಅವರು, ಅಶೋಕ್ ಗೆಹ್ಲೋಟ್ ಹಾಗೂ ಕಮಲ್‌ನಾಥ್ ಅವರು ತಮ್ಮ ಪುತ್ರರ ಟಿಕೆಟ್‌ಗೆ ಒತ್ತಡ ತಂದಿದ್ದರು. ಆದರೆ ಆ ಮನವಿಯನ್ನು ಸ್ವೀಕರಿಸಲು ತಮಗೆ ಇಷ್ಟವಿರಲಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಹೆಸರನ್ನೂ ಉಲ್ಲೇಖಿಸಿದರು.

ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧ ತಾವು ಪ್ರಸ್ತಾಪಿಸಿದ ವಿಚಾರಗಳನ್ನು ಜನರ ಬಳಿಗೆ ಒಯ್ಯಲು ವಿಫಲವಾದದ್ದೇ ಪಕ್ಷದ ಹೀನಾಯ ಸೋಲಿಗೆ ಕಾರಣ ಎಂದು ಪಕ್ಷಾಧ್ಯಕ್ಷರು ವಿಶ್ಲೇಷಿಸಿದರು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News