×
Ad

ಪ್ರಧಾನಿ ಮೋದಿ ಭೇಟಿಯಾದ ಜಗನ್‌ಮೋಹನ್ ರೆಡ್ಡಿ

Update: 2019-05-26 11:36 IST

ಹೊಸದಿಲ್ಲಿ, ಮೇ.26: ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ವೈ.ಎಸ್ ಜಗನ್ಮೋಹನ್ ರೆಡ್ಡಿ ರವಿವಾರ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾದ ರೆಡ್ಡಿ ರಾಜ್ಯದ ಪ್ರಮುಖ ಬೇಡಿಕೆಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ವೈಎಸ್‌ಆರ್‌ಸಿಪಿ ಮತ್ತು ರೆಡ್ಡಿಯ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ತನ್ನ ಈ ಬೇಡಿಕೆಯನ್ನು ಈಡೇರಿಸುವ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ನೀಡುವುದಾಗಿ ರೆಡ್ಡಿ ಘೋಷಿಸಿದ್ದರು. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಅಭೂತಪೂರ್ವ ಗೆಲುವು ಸಾಧಿಸಿತ್ತು. ದಿಲ್ಲಿಯ ಲೋಕ ಕಲ್ಯಾಣ ರಸ್ತೆಯಲ್ಲಿರುವ ಪ್ರಧಾನಿ ನಿವಾಸದಲ್ಲಿ ಮೋದಿಯನ್ನು ಭೇಟಿಯಾದ ಜಗನ್ಮೋಹನ್ ರೆಡ್ಡಿ ರಾಜ್ಯಕ್ಕೆ ವಿಶೇಷ ಸ್ಥಾನಮಾನದ ಜೊತೆಗೆ ಆಂಧ್ರ ಪ್ರದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ವಿವರಿಸಿದರು ಮತ್ತು ಕೇಂದ್ರದಿಂದ ಆರ್ಥಿಕ ನೆರವಿಗೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಮೇ 30ರಂದು ವಿಜಯವಾಡಾದಲ್ಲಿ ನಡೆಯಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ಮೋದಿಯನ್ನು ಜಗನ್ಮೋಹನ್ ರೆಡ್ಡಿ ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News