×
Ad

ಮಸೀದಿಯಿಂದ ಮನೆಗೆ ಹಿಂದಿರುಗುತ್ತಿದ್ದ ಯುವಕನ ಮೇಲೆ ಹಲ್ಲೆ: ‘ಜೈ ಶ್ರೀರಾಮ್’ ಹೇಳುವಂತೆ ಬಲವಂತ

Update: 2019-05-26 20:19 IST

ಹೊಸದಿಲ್ಲಿ, ಮೇ 26: ಮಸೀದಿಯಲ್ಲಿ ನಮಾಝ್ ನಿರ್ವಹಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ತನ್ನ ಮೇಲೆ ದಾಳಿ ನಡೆಸಲಾಗಿದೆ ಎಂದು 25 ವರ್ಷದ ಯುವಕರೊಬ್ಬರು ಆರೋಪಿಸಿದ್ದಾರೆ. ಗುರ್ಗಾಂವ್ ನ ಸದಾರ್ ಬಳೀ ಈ ಘಟನೆ ನಡೆದಿದೆ.

ತಾನು ಸಂಜೆಯ ನಮಾಝ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ 5ರಿಂದ 6 ಮಂದಿಯಿದ್ದ ತಂಡ ತನ್ನನ್ನು ತಡೆದು, ಟೋಪಿಯನ್ನು ತೆಗೆಯಿತು. ನಂತರ ‘ಜೈಶ್ರೀ ರಾಮ್’ ಹೇಳುವಂತೆ ಬಲವಂತಪಡಿಸಿತು. ಆದರೆ ತಾನು ನಿರಾಕರಿಸಿದಾಗ ತನ್ನ ಮೇಲೆ ಹಲ್ಲೆ ನಡೆಸಿತು ಎಂದು ಮುಹಮ್ಮದ್ ಬರಾಕತ್ ಆಲಂ ಎಂಬವರು ಆರೋಪಿಸಿದ್ದಾರೆ.

“ನನ್ನ ಬಳಿ ಬಂದವನೊಬ್ಬ ನೀನು ಟೋಪಿ ಧರಿಸುವ ಹಾಗಿಲ್ಲ ಎಂದು ಹೇಳಿದ. ನಾನು ಟೋಪಿ ತೆಗೆಯಲು ನಿರಾಕರಿಸಿದಾಗ ನನ್ನ ತಲೆಗೆ ಹೊಡೆದು ಟೋಪಿ ತೆಗೆದ” ಎಂದವರು ಆರೋಪಿಸಿದ್ದಾರೆ.

“ನನ್ನ ಸುತ್ತಲೂ ಇದ್ದ ಬೇರೆ ಜನಗಳತ್ತ ನಾನು ನೋಡಿದೆ. ಆದರೆ ಯಾರೂ ಸಹಾಯಕ್ಕೆಂದು ಮುಂದೆ ಬರಲಿಲ್ಲ. ಆಗ ಅವರು ಜೈಶ್ರೀರಾಮ್ ಹೇಳುವಂತೆ ನನ್ನನ್ನು ಬಲವಂತಪಡಿಸಿದರು. ನಾನೇಕೆ ಹೇಳಬೇಕು ಎಂದು ಪ್ರಶ್ನಿಸಿದೆ. ಆಗ ಅವರು ನನಗೆ ಹಲ್ಲೆ ನಡೆಸಿ ನನ್ನ ಕುರ್ತಾವನ್ನು ಹರಿದರು” ಎಂದು ಆಲಂ ಹೇಳಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News