ಬಾವನಿಂದಲೂ ಜೀವನಾಂಶ ಪಡೆಯಬಹುದು: ಸರ್ವೋಚ್ಚ ನ್ಯಾಯಾಲಯ

Update: 2019-05-26 16:07 GMT

ಹೊಸದಿಲ್ಲಿ, ಮೇ.26: ಕೌಟುಂಬಿಕ ಹಿಂಸೆ ಕಾನೂನಡಿ ಮಹಿಳೆ ತನ್ನ ಬಾವನಿಂದಲೂ ಜೀವನಾಂಶವನ್ನು ಪಡೆಯಬಹುದು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

ದೂರುದಾರ ಮಹಿಳೆಯ ಜೊತೆ ಕೌಟುಂಬಿಕ ಸಂಬಂಧ ಹೊಂದಿರುವ ವಯಸ್ಕ ಪುರುಷರಿಗೆ ಕೌಟುಂಬಿಕ ಹಿಂಸೆ ಕಾನೂನಿನಡಿ ಯಾವುದೇ ರಿಯಾಯಿತಿಯಿಲ್ಲ ಎಂದು ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ತಿಳಿಸಿದೆ. ಕೌಟುಂಬಿಕ ಸಂಬಂಧ ಹೊಂದಿರುವ ಪ್ರತಿ ಪುರುಷ ಸದಸ್ಯನನ್ನೂ ಒಳಗೊಳ್ಳಲು ಸಾಧ್ಯವಾಗುವಂತಹ ರೀತಿಯಲ್ಲಿ ಕೌಟುಂಬಿಕ ಹಿಂಸಾಚಾರ ಕಾನೂನನ್ನು ರೂಪಿಸಲಾಗಿದೆ. ಈ ಕಾನೂನಿನ ವಿಧಿ 2(ಕ್ಯೂ)ನಲ್ಲಿ ತಿಳಿಸಲಾಗಿರುವ ಪ್ರತಿವಾದ ಎಂಬ ಶಬ್ದದ ಅರ್ಥ ಸಂತ್ರಸ್ತ ಮಹಿಳೆಯ ಜೊತೆ ಕೌಟುಂಬಿಕ ಸಂಬಂಧ ಹೊಂದಿರುವ ವಯಸ್ಕ ಪುರುಷ ಎಂದಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

 ಈ ನಿಬಂಧನೆಯ ಪ್ರಕಾರ, ಸಂತ್ರಸ್ತ ಪತ್ನಿ ಅಥವಾ ವಿವಾಹ ಸಂಬಂಧ ಹೊಂದಿರುವ ಮಹಿಳೆ ತನ್ನ ಪತಿಯ ಸಂಬಂಧಿಕರ ಅಥವಾ ಪುರುಷ ಜೊತೆಗಾರನ ವಿರುದ್ಧವೂ ದೂರು ದಾಖಲಿಸಬಹುದಾಗಿದೆ. ಕೌಟುಂಬಿಕ ಸಂಬಂಧ ಎಂದರೆ, ಒಂದೇ ಮನೆಯಲ್ಲಿ ವಿವಾಹವಾಗಿ ಅಥವಾ ಸಂಬಂಧಿಕರಾಗಿ ಪರಸ್ಪರ ಒಪ್ಪಿಗೆಯೊಂದಿಗೆ ಜೊತೆಯಾಗಿ ಜೀವಿಸುತ್ತಿರುವ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ತನ್ನ ಮೃತ ಸಹೋದರನ ಪತ್ನಿಗೆ ಮಾಸಿಕ 4,000ರೂ. ಮತ್ತು ಆತನ ಮಗಳಿಗೆ ಮಾಸಿಕ 2,000ರೂ. ನೀಡುವಂತೆ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸುವ ವೇಳೆ ಶ್ರೇಷ್ಠ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News