ಗೋಮಾಂಸ ತಿನ್ನುವ ಹಕ್ಕನ್ನು ಸಮರ್ಥಿಸಿ ಫೇಸ್ ಬುಕ್ ಪೋಸ್ಟ್: 2 ವರ್ಷದ ಬಳಿಕ ಆದಿವಾಸಿ ಪ್ರೊಫೆಸರ್ ಬಂಧನ
ರಾಂಚಿ, ಮೇ 26: ಗೋಮಾಂಸ ತಿನ್ನುವ ಹಕ್ಕನ್ನು ಸಮರ್ಥಿಸಿ ಫೇಸ್‌ಬುಕ್‌ನಲ್ಲಿ ಬರೆದಿದ್ದ ಜಾರ್ಖಂಡ್‌ನ ಪ್ರಮುಖ ಆದಿವಾಸಿ ಕಾರ್ಯಕರ್ತ ಹಾಗೂ ಪ್ರೊಫೆಸರ್ ಜೀತ್‌ರಾಯ್ ಹನ್ಸ್‌ಡ ಎಂಬವರನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
2017ರಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ 2 ವರ್ಷದ ಬಳಿಕ, ಚುನಾವಣೆ ಮುಗಿದೊಡನೆ ಬಂಧಿಸಿರುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಜೀತ್‌ರಾಯ್ ಅವರು ಜಾರ್ಖಂಡ್‌ನ ಜಮ್‌ಶೆಡ್‌ಪುರ ಜಿಲ್ಲೆಯ ಸಾಕ್ಚಿ ಎಂಬ ಗ್ರಾಮದಲ್ಲಿರುವ ‘ಗವರ್ನ್‌ಮೆಂಟ್ ಸ್ಕೂಲ್ ಆ್ಯಂಡ್ ಕಾಲೇಜ್ ಫಾರ್ ವುಮೆನ್’ನಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೋಮಾಂಸ ತಿನ್ನುವುದು ತಮ್ಮ ಆದಿವಾಸಿ ಸಮುದಾಯದವರ ಹಕ್ಕಾಗಿದೆ ಎಂದು ಸಮರ್ಥಿಸಿಕೊಂಡು ಫೇಸ್‌ಬುಕ್‌ನಲ್ಲಿ ಲೇಖನ ಬರೆದಿದ್ದರು. ಈ ಬಗ್ಗೆ ಆರೆಸ್ಸೆಸ್‌ನ ವಿದ್ಯಾರ್ಥಿ ಸಂಘಟನೆ ಎಬಿವಿಪಿ 2017ರ ಜೂನ್‌ನಲ್ಲಿ ದೂರು ಸಲ್ಲಿಸಿತ್ತು.
ಆದರೆ ಇದೀಗ ದೂರು ಸಲ್ಲಿಸಿ 2 ವರ್ಷದ ಬಳಿಕ ಪ್ರೊಫೆಸರ್ ಜೀತ್‌ರಾಯ್‌ರನ್ನು ಬಂಧಿಸಿರುವ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ. ಸಾರ್ವತ್ರಿಕ ಚುನಾವಣೆಯ ಸಂದರ್ಭ ಆದಿವಾಸಿಗಳ ವಿರೋಧ ಕಟ್ಟಿಕೊಳ್ಳಲು ಬಯಸದ ಬಿಜೆಪಿ ಸರಕಾರ, ಚುನಾವಣೆ ಮುಗಿದ ಬಳಿಕ ಆದಿವಾಸಿ ಪ್ರೊಫೆಸರ್‌ರನ್ನು ಬಂಧಿಸಿದೆ ಎಂದು ಹೇಳಲಾಗುತ್ತಿದೆ. ಜಾರ್ಖಂಡ್‌ನಲ್ಲಿ 14 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 12 ಸ್ಥಾನ ಗೆದ್ದುಕೊಂಡಿದೆ.
ಸಾಕ್ಚಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಜೀತ್‌ರಾಯ್ 2017ರಲ್ಲಿ ಫೇಸ್‌ಬುಕ್‌ನಲ್ಲಿ ಬರೆದಿರುವ ಲೇಖನದಲ್ಲಿ ದನದ ಮಾಂಸ ತಿನ್ನುವುದು ಆದಿವಾಸಿಗಳ ಹಕ್ಕಾಗಿದೆ ಎಂದಿದ್ದರು ಹಾಗೂ ಹಿಂದೂ ಧರ್ಮದ ಆಚರಣೆಗಳನ್ನು ಅನುಸರಿಸಲು ತಮಗೆ ಮನಸ್ಸಿಲ್ಲ ಎಂದಿದ್ದರು. ಅಲ್ಲದೆ ಭಾರತದ ರಾಷ್ಟ್ರೀಯ ಹಕ್ಕಿಯಾಗಿರುವ ನವಿಲುಗಳನ್ನೂ ಆದಿವಾಸಿಗಳು ಕೊಂದು ತಿನ್ನುತ್ತಾರೆ ಎಂದು ಬರೆದಿದ್ದರು.
2017ರಲ್ಲಿ ಜೀತ್‌ರಾಯ್‌ರನ್ನು ಠಾಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು, ಆದರೆ ಬಂಧಿಸಿರಲಿಲ್ಲ. ನಿರೀಕ್ಷಣಾ ಜಾಮೀನು ಕೋರಿ ಅವರು ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಧಾರ್ಮಿಕ ಭಾವನೆಗೆ ಘಾಸಿ ಎಸಗಲು ಪ್ರಯತ್ನ ಹಾಗೂ ಪಂಗಡಗಳ ಮಧ್ಯೆ ದ್ವೇಷ ಭಾವನೆ ಮೂಡಿಸಲು ಪ್ರಯತ್ನಿಸಿರುವ ಆರೋಪವನ್ನು ಜೀತ್‌ರಾಯ್ ವಿರುದ್ಧ ಹೊರಿಸಲಾಗಿದೆ.
ಈ ಮಧ್ಯೆ, ಜೀತ್‌ರಾಯ್ ತಮ್ಮ ಬರಹದಲ್ಲಿ ತಿಳಿಸಿರುವ ವಿಷಯಗಳು ಆದಿವಾಸಿ ಸಮುದಾಯದ ಆಚರಣೆಯಲ್ಲಿರುವ ವಿಷಯಗಳ ಸಮರ್ಥನೆಯಾಗಿದ್ದು ಅವರನ್ನು ಕಾಲೇಜಿನಿಂದ ಅಮಾನತು ಮಾಡಬಾರದು ಎಂದು ಕೋರಿ 2017ರಲ್ಲಿ ತಾನು ಸಾಕ್ಚಿ ಕಾಲೇಜಿನ ಆಡಳಿತ ನೋಡಿಕೊಳ್ಳುತ್ತಿರುವ ಕೊಲ್ಹಾನ್ ವಿವಿಉ ಕುಲಪತಿಗಳಿಗೆ ಪತ್ರ ಬರೆದಿದ್ದೇನೆ ಎಂದು ಆದಿವಾಸಿ ಹಕ್ಕುಗಳ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ‘ಮಹ್ಜಿ ಪರಗಣ ಮಹಲ್’ನ ಅಧ್ಯಕ್ಷ ದಸ್ಮತ್ ಹನ್ಸ್‌ಡ ಹೇಳಿದ್ದಾರೆ. ಅವರನ್ನು ಅಮಾನತುಗೊಳಿಸಲಾಗಿದೆಯೇ ಎಂಬುದು ತಿಳಿದಿಲ್ಲ. ಆದರೆ ಅವರು ಈಗ ಕಾಲೇಜಿಗೆ ಹೋಗುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.