ಸಮುದ್ರ ನೀರು ಸಿಹಿಗೊಳಿಸುವ ಆವಿಷ್ಕಾರ: ನಿಟ್ಟೆ ತಾಂತ್ರಿಕ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳ ಪ್ರಯೋಗ

Update: 2019-05-27 06:34 GMT

ಮಂಗಳೂರು, ಮೇ 26: ಹನಿ ನೀರಿಗೂ ಬೆಲೆ ತೆರುವ ಕಾಲವಾದ ಬೇಸಿಗೆಯಲ್ಲಿ ಸ್ವಚ್ಛ ಕುಡಿಯುವ ನೀರಿನ ಕೊರತೆ ನಿರ್ಮಾಣವಾಗುವುದು ಸರ್ವೇ ಸಾಮಾನ್ಯ. ಇಂತಹ ನಿರ್ಣಾಯಕ ಸಮಯದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಸಮುದ್ರ ನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದಾರೆ.

ನೇತ್ರಾವತಿ ನದಿಯ ಒಡಲು ಬರಿದಾಗುತ್ತಿದ್ದು, ನಿತ್ಯೋಪಯೋಗ ನೀರಿಗಾಗಿ ಪರದಾಟ ಹೆಚ್ಚುತ್ತಿದೆ. ಪಕ್ಕದಲ್ಲೇ ಇರುವ ಅರಬ್ಬಿ ಸಮುದ್ರದ ಉಪ್ಪುನೀರು ಎಥೇಚ್ಛವಾಗಿ ಸಿಕ್ಕರೂ ಕುಡಿಯಲು ಯೋಗ್ಯವಾಗಿಲ್ಲ. ಇದೇ ವಿಷಯವನ್ನು ಕೇಂದ್ರೀಕರಿಸಿ ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಕುಡಿಯಲು ನೀರಿನ ಕೊರತೆ ನೀಗಿಸುವ ಸಲುವಾಗಿ ‘ಸೀ ವಾಟರ್ ಸೋಲಾರ್ ಡಿಸ್ಯಾಲಿನೇಟರ್’ ಮಾಡೆಲ್‌ನ್ನು ಕೈಗೆತ್ತಿಕೊಂಡು ಪ್ರಯೋಗದಲ್ಲಿ ಯಶಸ್ಸು ಗಳಿಸಿದ್ದಾರೆ.

ಮೆಕಾನಿಕಲ್ ವಿಭಾಗದ ಶ್ರೇಯಸ್ ಪೈ, ಸುವಿಧ್ ಅಧಿಕಾರಿ, ಹರ್ಷಾ ಕರ್ಕೇರ ಹಾಗೂ ವಿನಯರಾಜ್ ಹೆಬ್ಬಾರ್ ಎಂಬ ನಾಲ್ಕು ಮಂದಿ ಅಂತಿಮ ವರ್ಷದ ಬಿ.ಇ. ವಿದ್ಯಾರ್ಥಿಗಳ ತಂಡವು ಪ್ರಾಧ್ಯಾಪಕ ಡಾ.ಮಲ್ಲಿಕಪ್ಪ ಮಾರ್ಗದರ್ಶನದಲ್ಲಿ ಸಮುದ್ರ ನೀರಿನಿಂದ ಉಪ್ಪಿನ ಅಂಶವನ್ನು ಹೊರ ತೆಗೆದು ಕುಡಿಯಲು ಯೋಗ್ಯವಾದ ನೀರನ್ನಾಗಿ ಮಾರ್ಪಡಿಸುವ ಸಂಶೋಧನೆ ನಡೆಸಿದ್ದಾರೆ.

 ಸಮುದ್ರ ನೀರನ್ನು ತಂದು ‘ಸೀ ವಾಟರ್ ಸೋಲಾರ್ ಡಿಸ್ಯಾಲಿನೇಟರ್’ ಮಾದರಿಯ ಯಂತ್ರಕ್ಕೆ ಸುರಿದು ಸಂಸ್ಕರಿಸಿದಾಗ ಉಪ್ಪುನೀರನ ಶೇ.40ರಷ್ಟು ಸಿಹಿ ನೀರು ದೊರೆಯುತ್ತದೆ. ನಿರ್ದಿಷ್ಟವಾಗಿ ಒಂದು ಲೀಟರ್ ಉಪ್ಪು ನೀರನ್ನು ಬಾಷ್ಪೀಕರಣ (ಆವಿಯಾಗುವಿಕೆ)ದಲ್ಲಿ ಪ್ರಯೋಗಿಸಿದರೆ 400 ಮಿ.ಲೀ. ಸಿಹಿ ನೀರನ್ನು ಪಡೆಯಬಹುದು’ ಎಂದು ಸಿಹಿನೀರು ಆವಿಷ್ಕರಿಸಿದ ಮೆಕಾನಿಕಲ್ ವಿಭಾಗದ ತಂಡದಲ್ಲಿನ ವಿದ್ಯಾರ್ಥಿ ಶ್ರೇಯಸ್ ಪೈ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

‘ಒಂದು ನಿರ್ದಿಷ್ಟವಾದ ಪ್ರಾಜೆಕ್ಟ್‌ನ ಪ್ರಮಾಣ ದಲ್ಲಿಯೇ ಸಿಹಿನೀರನ್ನು ಉತ್ಪಾದಿಸಬಹುದು. ನಾಲ್ವರು ವಿದ್ಯಾರ್ಥಿಗಳು ಸೇರಿ 25 ಲೀಟರ್ ಪ್ರಮಾಣದ ಉಪ್ಪುನೀರನ್ನು ಆವಿಷ್ಕರಿಸುವ ಮಾಡೆಲ್‌ನ್ನು ತಯಾರಿಸಿದ್ದೇವೆ. ಈ ಮಾಡೆಲ್ ಬಳಸಿಕೊಂಡು ಒಂದು ದಿನದಲ್ಲಿ ಆರು ಲೀಟರ್ ಸಿಹಿನೀರನ್ನು ಉತ್ಪಾದಿಸಲಾಗುತ್ತಿದೆ. ಬೆಳಗ್ಗೆ 9:30ಕ್ಕೆ ಆರಂಭವಾದ ಆವಿಷ್ಕಾರವು ಸಂಜೆ 4:30ಗೆ ಪೂರ್ಣಗೊಂಡಿತು’ ಎಂದು ಅವರು ತಿಳಿಸಿದರು.

‘ನೈಸರ್ಗಿಕವಾಗಿ, ಉಚಿತವಾಗಿಯೇ ಲಭ್ಯವಿರುವ ಸಮುದ್ರದ ಉಪ್ಪುನೀರನ್ನು ಬಳಸಿ ಬೇಸಿಗೆಯಲ್ಲಿ ಸಿಹಿ ನೀರಾಗಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯ. ಈ ನೂತನ ಆವಿಷ್ಕಾರಕ್ಕೆ ಸುಮಾರು 15ರಿಂದ 20 ಸಾವಿರ ರೂ. ಖರ್ಚಾಗಿದೆ. ಮಾಡೆಲ್‌ನಲ್ಲಿ ಯಾವುದೇ ಇಲೆಕ್ಟ್ರಾನಿಕ್ಸ್ ಸಾಧನಗಳಿಲ್ಲ; ಕೇವಲ ಮೆಕಾನಿಕಲ್ ಸಾಧನಗಳಿಂದ ಮಾಡೆಲ್‌ನ್ನು ರೂಪಿಸಲಾಗಿದೆ’ ಎಂದು ಶ್ರೇಯಸ್ ಪೈ ವಿವರಿಸಿದರು.

ಸಿಹಿನೀರಾಗುವ ವಿಧಾನ

‘ಸೀ ವಾಟರ್ ಸೋಲಾರ್ ಡಿಸ್ಯಾಲಿನೇಟರ್’ ಮಾಡೆಲ್‌ನ ಮೇಲ್ಭಾಗದ ಸಣ್ಣ ಟ್ರೇಗೆ ಉಪ್ಪುನೀರನ್ನು ಸುರಿಯಲಾಗುತ್ತದೆ. ಇದರಲ್ಲಿ 10 ಟ್ರೇಗಳಿದ್ದು, ಪೈಪ್ ಮೂಲಕ ಸರಬರಾಜಾಗುವ ನೀರು ಮೊದಲನೇ ಟ್ರೇ ತುಂಬಿದ ಬಳಿಕ ಮತ್ತೊಂದಕ್ಕೆ ರವಾನೆಯಾಗುತ್ತದೆ. ಹಂತಹಂತವಾಗಿ ಎಲ್ಲ ಟ್ರೇಗಳು ಸಮಾನವಾಗಿ ತುಂಬಿಕೊಳ್ಳುತ್ತವೆ. ಮಾಡೆಲ್ ಸುತ್ತಮುತ್ತಲೂ ಗಾಜಿನಿಂದ ಆವೃತವಾಗಿದೆ.

ಬಿಸಿಲಿನ ಪ್ರಮಾಣ ಹೆಚ್ಚಿದಂತೆಲ್ಲ ಉಪ್ಪುನೀರು ಆವಿಯಾಗುತ್ತಾ ಗಾಜಿನ ಮೂಲಕ ಮಾಡೆಲ್‌ನ ಕೆಳಗಿನ ಭಾಗಕ್ಕೆ ಸಾಗುತ್ತದೆ. ಅಲ್ಲಿಂದ ಸಣ್ಣ ಪೈಪ್‌ವೊಂದರ ಮೂಲಕ ಟ್ಯಾಂಕ್‌ಗೆ ಹನಿಹನಿಯಾಗಿ ನೀರು ಶೇಖರಣೆಗೊಳ್ಳುತ್ತದೆ. ಉಪ್ಪುನೀರಿನ ಶೇ.40ರಷ್ಟು ಪ್ರಮಾಣ ಸಿಹಿನೀರಾಗಿ ಪರಿವರ್ತನೆಗೊಳ್ಳುತ್ತದೆ. ಇನ್ನುಳಿದಂತೆ ಸಮುದ್ರದ ನೀರಿನಲ್ಲಿದ್ದ ಉಪ್ಪಿನ ಅಂಶ ಪ್ರತ್ಯೇಕಗೊಳ್ಳುತ್ತದೆ. ಇದು ಜೆರ್ಮ್ಸ್, ಬ್ಯಾಕ್ಟೀರಿಯಾಗಳನ್ನು ಕೂಡ ಪ್ರತ್ಯೇಕಿಸುವ ತಂತ್ರಜ್ಞಾನವನ್ನೂ ಹೊಂದಿದ್ದು, ಈ ನೀರಿಗೆ ಅಲ್ಪ ಪ್ರಮಾಣದಲ್ಲಿ ಮಿನರಲ್ಸ್ ಸೇರಿದರೆ ಕುಡಿಯಲು ಯೋಗ್ಯವಾದ ನೀರಾಗುತ್ತದೆ ಎಂದು ಶ್ರೇಯಸ್ ಪೈ ವಿವರಿಸಿದರು.

ಸೂರ್ಯನ ಬೆಳಕಿನ ಶಾಖದ ಮೂಲಕ ಸಮುದ್ರದ ಉಪ್ಪುನೀರನ್ನು ಸಿಹಿನೀರನ್ನಾಗಿಸುವ ತಂತ್ರಜ್ಞಾನವನ್ನು ವಿಭಾಗದ ನಾಲ್ವರು ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ. ಸೋಲಾರ್ ವಾಟರ್ ಹೀಟರ್‌ನಂತೆ ಇದು ಕಾರ್ಯನಿರ್ವಹಿಸುತ್ತದೆ. ಈ ಮಾದರಿಯನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಿದ್ದೇವೆ.

-ಡಾ.ಮಲ್ಲಿಕಪ್ಪ, ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕ, ನಿಟ್ಟೆ ತಾಂತ್ರಿಕ ಕಾಲೇಜು

ಕಳೆದ ನಾಲ್ಕು ತಿಂಗಳ ಕಾಲೇಜು ಪರೀಕ್ಷೆಗಳ ನಡುವೆಯೇ ಈ ತಂತ್ರಜ್ಞಾನ ಆವಿಷ್ಕರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇದೇ ಮಾದರಿಯನ್ನು ಕಡಿಮೆ ವೆಚ್ಚದಲ್ಲಿ ತಯಾರಿಸುವ ಬಗ್ಗೆ ಚಿಂತನೆ ಇದೆ. ನಮ್ಮ ಪ್ರಾಜೆಕ್ಟ್‌ಗೆ ಪ್ರಸಕ್ತ ವರ್ಷದ ‘ಬೆಸ್ಟ್ ಪ್ರಾಜೆಕ್ಟ್ ಆಫ್ ದಿ ಇಯರ್’ ಪ್ರಶಸ್ತಿ ಲಭಿಸಿದೆ.

- ಶ್ರೇಯಸ್ ಪೈ, ವಿದ್ಯಾರ್ಥಿ, ನಿಟ್ಟೆ ತಾಂತ್ರಿಕ ಕಾಲೇಜು

Writer - ಬಂದೇ ನವಾಝ್ ಮ್ಯಾಗೇರಿ

contributor

Editor - ಬಂದೇ ನವಾಝ್ ಮ್ಯಾಗೇರಿ

contributor

Similar News