ಕುವೈತ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮಂಗಳೂರಿನ ಯುವಕರಿಗೆ ರಕ್ಷಣೆ

Update: 2019-05-27 08:21 GMT

ಮಂಗಳೂರು, ಮೇ 27: ಕುವೈತ್‌ನಲ್ಲಿ ಉದ್ಯೋಗಕ್ಕೆ ತೆರಳಿದ್ದ ಮಂಗಳೂರು ಮೂಲದ 35 ಯುವಕರು ಸಂಕಷ್ಟದಲ್ಲಿರುವುದನ್ನು ತಿಳಿದು ತಕ್ಷಣ ಸ್ಪಂದಿಸಿ ಅವರ ರಕ್ಷಣೆ ಹಾಗೂ ಸೂಕ್ತ ವ್ಯವಸ್ಥೆಗೆ ಮುಂದಾಗಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಶಾಸಕರಾದವರು ತಮ್ಮ ಕ್ಷೇತ್ರದ ಜನರು ಸಂಕಷ್ಟದಲ್ಲಿರುವಾಗ ತಕ್ಷಣ ಸ್ಪಂದಿಸಿ ಅವರ ನೆರವಿಗೆ ಕ್ರಮ ಕೈಗೆೊಂಡಿರುವುದು ಅವರ ಕರ್ತವ್ಯ ಪ್ರಜ್ಞೆ ಹಾಗೂ ಜನರ ಬಗೆಗಿನ ಅವರ ಕಳಕಳಿಯನ್ನು ವ್ಯಕ್ತಪಡಿಸುತ್ತದೆ. ಈ ಬಗ್ಗೆ ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಸಾಕಷ್ಟು ಪ್ರಶಂಸೆಯ ಪೋಸ್ಟ್‌ಗಳು, ಮಾತುಗಳು ಕೇಳಿಬರುತ್ತಿವೆ.

ಕುವೈತ್‌ಗೆ ಉದ್ಯೋಗಕ್ಕೆ ತೆರಳಿದ್ದ ಮಂಗಳೂರು ಮೂಲದ 35 ಯುವಕರು ಉದ್ಯೋಗವೂ ಇಲ್ಲದೆ, ಆಹಾರವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ದಿನ ದೂಡುತ್ತಿರುವ ಕುರಿತಂತೆ ವೀಡಿಯೋವೊಂದು ಕಳೆದ 3 ದಿನಗಳ ಹಿಂದೆ ವೈರಲ್ ಆಗಿತ್ತು. ಇದನ್ನು ಗಮನಿಸಿ ತಕ್ಷಣ ಸ್ಪಂದಿಸಿದ ಶಾಸಕ ವೇದವ್ಯಾಸ ಕಾಮತ್ ತೊಂದರೆಗೆ ಸಿಲುಕಿರುವ ಯುವಕರ ಹೆಸರು ಮತ್ತು ದಾಖಲೆಗಳನ್ನು ಭಾರತದ ವಿದೇಶಾಂಗ ಇಲಾಖೆಯ ಅಧಿಕಾರಿಗಳಿಗೆ, ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಈ ನಡುವೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಮೂಲಕ ಕೇಂದ್ರ ಸಚಿವರಾಗಿದ್ದ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಮೂಲಕವೂ ವಿದೇಶಾಂಗ ಇಲಾಖೆಗೆ ಅತಂತ್ರ ಸ್ಥಿತಿಯಲ್ಲಿರುವ ಯುವಕರ ದಾಖಲೆಗಳನ್ನು ಕಳುಹಿಸಿಕೊಡಲಾಗಿದೆ. ಡಿವಿ ಹಾಗೂ ನಳಿನ್ ಕೂಡ ಆ ಬಗ್ಗೆ ವಿದೇಶಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಸದ್ಯ ಕುವೈತ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಯುವಕರಿಗೆ ಅಲ್ಲಿ ಉದ್ಯೋಗ ಮಾಡುವ ಯಾವುದೇ ಆಸಕ್ತಿ ಹೊಂದಿಲ್ಲ. ಅವರೆಲ್ಲರೂ ತಾಯ್ನಿಡಿಗೆ ವಾಪಾಸಾಗುವ ಬೇಡಿಕೆಯನ್ನು ವಿಡಿಯೋಕಾಲ್ ಮೂಲಕ ಶಾಸಕ ಕಾಮತ್ ಅವರಲ್ಲಿ ವ್ಯಕ್ತಪಡಿಸಿದ್ದಾರೆ. ಆ ಯುವಕರಿಗೆ ವೀಸಾವನ್ನು ಎಸ್ಪೆಕ್ಟ್ ಪೆಟ್ರೋಲಿಯಂ ಸರ್ವಿಸ್, ಕುವೈತ್ ಸ್ಟಾಫ್ಟಿಂಗ್ ಆ್ಯಂಡ್ ರಿಕ್ರೂಟಿಂಗ್, ಅಲಿ ಸಭಾ ಅಲ್ ಸಲೀಂ, ಬ್ಲಾಕ್-9, ಅಲ್ ಅಹ್ಮದಿ 17 ಫಾಲೋವರ್ಸ್ ಎನ್ನುವ ಸಂಸ್ಥೆ ನೀಡಿದೆ. ಇನ್ನು ಈ ಯುವಕರ ಪಾಸ್‌ಪೋರ್ಟ್ ಮೂಲಪ್ರತಿ(ಒರಿಜಿನಲ್ ಕಾಪಿ)ಯನ್ನು ಎನ್ಯಾಸ್ಕೊ ಜೆನೆರಲ್ ಟ್ರೇಡಿಂಗ್‌ಆ್ಯಂಡ್ ಕಾಂಟ್ರಾಕ್ಟಿಂಗ್ ಕಂಪೆನಿ, ವಿಳಾಸ- 21ನೇ ಮಹಡಿ, ಅಲ್-ಜೋನ್ ಸೆಂಟರ್ ಫಹಾದ್ ಅಲ್ ಸಲೀಂ ಸ್ಟ್ರೀಟ್, ಬ್ಲಾಕ್ 12, ಕಿಬ್ಲಾ, ಕುವೈತ್ ಸಿಟಿ ಈ ಸಂಸ್ಥೆ ಇಟ್ಟುಕೊಂಡಿದೆ ಎನ್ನುವ ಮಾಹಿತಿಯನ್ನು ಶಾಸಕ ವೇದವ್ಯಾಸ ಕಾಮತ್ ಅವರು ವಿದೇಶಾಂಗ ಇಲಾಖೆಗೆ ರವಾನಿಸಿದ್ದಾರೆ. ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ನಮ್ಮ ಯುವಕರ ಪಾಸ್ ಪೋರ್ಟ್ ಮತ್ತು ಇತರ ದಾಖಲೆಗಳನ್ನು ಯುವಕರಿಗೆ ಹಸ್ತಾಂತರಿಸಿ ಅವರೆಲ್ಲರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿಕೊಡುವ ತನಕ ಇದರ ಸಂಪೂರ್ಣ ಫಾಲೋ ಅಪ್ ಮಾಡಲಾಗುವುದು. ಕೆಲವೇ ದಿನಗಳೊಳಗೆ ಯುವಕರನ್ನು ನಮ್ಮ ರಾಷ್ಟ್ರಕ್ಕೆ ಕರೆತರುವ ಕೆಲಸ ಕಾರ್ಯಗಳಿಗೆ ವೇಗ ಸಿಗಲಿದೆ. ಯುವಕರು ಭಾರತಕ್ಕೆ ಹೊರಡುವ ತನಕ ಅಲ್ಲಿಯವರೆಗೆ ಅವರ ಸಂಪೂರ್ಣ ಊಟ, ತಿಂಡಿ, ವಸತಿ ವ್ಯವಸ್ಥೆಯನ್ನು ಮಂಗಳೂರು ಮೂಲದ ಅನಿವಾಸಿ ಭಾರತೀಯ, ನನ್ನ ಮಿತ್ರರೂ ಆಗಿರುವ ರಾಜ್ ಭಂಡಾರಿ ಹಾಗೂ ಭಾರತೀಯ ಪ್ರವಾಸಿ ಪರಿಷತ್ ನೋಡಿಕೊಳ್ಳುತ್ತಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.


ಕೆಲವೇ ದಿನಗಳಲ್ಲಿ ಯುವಕರು ವಾಪಸಾತಿಗೆ ಕ್ರಮ: ವೇದವ್ಯಾಸ ಕಾಮತ್

 ‘‘ನಾನು ಈಗಾಗಲೇ ಆ ಯುವಕರನ್ನು ಉದ್ಯೋಗಕ್ಕಾಗಿ ಕಳುಹಿಸಿದ ಕಂಪೆನಿಯ, ಸ್ಥಳೀಯ ಹಾಗೂ ಮುಂಬೈ ಏಜೆಂಟ್ ಜತೆಗೂ ಮಾತನಾಡಿದ್ದೇನೆ. ಯುವಕರು ಅಲ್ಲಿ ಉದ್ಯೋಗ ಮುಂದುವರಿಸಲು ಆಸಕ್ತಿ ಹೊಂದಿಲ್ಲ. ಅವರನ್ನು ಹಿಂದಕ್ಕೆ ಕರೆತರಬೇಕಾದರೆ ಸಾಕಷ್ಟು ಪ್ರಕ್ರಿಯೆಗಳು ನಡೆಯಬೇಕಿದೆ. ಯುವಕರು ನಮಗೆ ಟಿಕೆಟ್ ವ್ಯವಸ್ಥೆ ಮಾಡಿ ವಾಪಸ್ ನಮ್ಮೂರಿಗೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಅವರು ಉದ್ಯೋಗ ಮಾಡುತ್ತಿದ್ದ ಕಂಪೆನಿಯವರು ಕೆಲ ನೆಪ ನೀಡಿ ವೇತನ ನೀಡಿಲ್ಲ. ಹಾಗಾಗಿ ಅವರಿಗೆ ಟಿಕೆಟ್ ವ್ಯವಸ್ಥೆ ಮಾಡಬೇಕಾಗಿದೆ. ಅವರನ್ನು ಕಳುಹಿಸಿದ ಏಜೆಂಟ್ ಬಳಿಯೂ ಮಾತನಾಡಿದ್ದೇನೆ. ಅವರು ಹೇಳುವ ಪ್ರಕಾರ ಯುವಕರು ನೀಡಿರುವ ತಲಾ 60,000 ರೂ.ಗಳಲ್ಲಿ 50,000 ರೂ.ಗಳನ್ನು ಸಂಬಂಧಪಟ್ಟ ಪ್ರಕ್ರಿಯೆಗಳಿಗಾಗಿ ನೀಡಲಾಗಿದೆ. ಉಳಿದಂತೆ 10 ಸಾವಿರ ರೂ.ಗಳಲ್ಲಿ ಆ ಯುವಕರು ಕುವೈತ್‌ಗೆ ತೆರಳುವಾಗ ಅವರಿಗೆ ಪ್ರಯಾಣ, ಮುಂಬೈನಲ್ಲಿ ಊಟೋಪಚಾರದ ವ್ಯವಸ್ಥೆಗಾಗಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮುಂಬೈನ ಏಜೆಂಟ್ ಬಳಿಯೂ ಮಾತನಾಡಿದ್ದು, ಅವರು ಎರಡು ದಿನಗಳಲ್ಲಿ ಮಾಹಿತಿ ಒದಗಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಯುವಕರನ್ನು ವಾಪಸ್ ಕರೆಸಲು ಟಿಕೆಟ್ ವ್ಯವಸ್ಥೆ ಆಗಬೇಕಾಗಿದೆ. ಸದ್ಯ ದೇಶದಲ್ಲಿ ನೂತನ ಸರಕಾರ ರಚನೆಯ ಪ್ರಕ್ರಿಯೆಗಳು ನಡೆಯುತ್ತಿವೆ. ನಾಲ್ಕೈದು ದಿನಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು ಅವರನ್ನು ವಾಪಸ್ ಕರೆತರುವ ಕಾರ್ಯ ಆಗಲಿದೆ’’ ಎಂದು ವೇದವ್ಯಾಸ ಕಾಮತ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ 

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News