ಬೇಗುಸರಾಯ್ ನಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸೆ: ಕನ್ಹಯ್ಯಾ ಕಿಡಿ

Update: 2019-05-27 08:40 GMT

ಬಿಹಾರ, ಮೇ 27: ಬೇಗುಸರಾಯ್ ನಲ್ಲಿ ದಲಿತರು ಹಾಗೂ ಮುಸ್ಲಿಮರ ವಿರುದ್ಧದ ಹಿಂಸಾಚಾರ ಘಟನೆಗಳನ್ನು ಉಲ್ಲೇಖಿಸಿ ಕನ್ಹಯ್ಯ ಕುಮಾರ್ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಕಿಡಿ ಕಾರಿದ್ಧಾರೆ.

‘‘ಇತ್ತೀಚೆಗೆ ಬೇಗುಸರಾಯ್ ನಲ್ಲಿ ಒಬ್ಬ ಪುರುಷ ಹಾಗೂ ಮಹಿಳೆಗೆ ಕಿರುಕುಳ ನೀಡಲಾಗಿತ್ತು ಹಾಗೂ ಒಬ್ಬ ಮುಸ್ಲಿಂ ವರ್ತಕನಿಗೆ ಪಾಕಿಸ್ತಾನಕ್ಕೆ ಹೋಗಲು ಹೇಳಲಾಯಿತು ಹಾಗೂ ಗುಂಡಿಕ್ಕಿ ಸಾಯಿಸಲಾಗುವುದು ಎಂದು ಬೆದರಿಸಲಾಯಿತು. ಆಡಳಿತ ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂಬ ಧೈರ್ಯದಿಂದ ಇಂತಹ ಕೃತ್ಯಗಳನ್ನು ನಡೆಸಲಾಗುತ್ತಿದೆ’’ ಎಂದು ಬಿಜೆಪಿಯ ಗಿರಿರಾಜ್ ಸಿಂಗ್ ಎದುರು ಲೋಕಸಭಾ ಚುನಾವಣೆಯಲ್ಲಿ ಬೇಗುಸರಾಯ್ ಕ್ಷೇತ್ರದಿಂದ ಸೋಲು ಕಂಡಿರುವ ಕನ್ಹಯ್ಯ ಆರೋಪಿಸಿದ್ದಾರೆ.

ಅಪರಾಧಿಗಳು ತಮ್ಮ ಅಪರಾಧದ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಅಭ್ಯಾಸ ಮುಂದುವರಿಸಿದ್ದಾರೆ. ಕಳೆದ ಐದು ವರ್ಷಗಳ ಬಿಜೆಪಿ ಅವಧಿಯಲ್ಲಿ ಈ ಟ್ರೆಂಡ್ ಆರಂಭಗೊಂಡಿತ್ತು ಎಂದೂ ಕನ್ಹಯ್ಯ ಹೇಳಿದ್ದಾರೆ.

ಇಂತಹ ಘಟನೆಗಳು ಹೆಚ್ಚಾಗುತ್ತಿದ್ದರೂ ಅವುಗಳು ಹೆಚ್ಚು ಚರ್ಚಿತವಾಗುತ್ತಿಲ್ಲ ಎಂದೂ ಕನ್ಹಯ್ಯ ಟ್ವೀಟ್ ಮಾಡಿದ್ದಾರೆ. ಇಂತಹ ಘಟನೆಗಳ ಬಗ್ಗೆ ಮೌನ ತಾಳುವ ರಾಜಕೀಯ ನಾಯಕರನ್ನೂ ಖಂಡಿಸಿದ ಕನ್ಹಯ್ಯ ಮೌನವಾಗಿರುವವರೂ ರಾಜಕೀಯ ಲಾಭಕ್ಕಾಗಿ ದ್ವೇಷ ಹರಡುವ ತಪ್ಪಿತಸ್ಥರಾಗುತ್ತಾರೆ’’ ಎಂದು ಹೇಳಿದ್ದಾರೆ.

‘‘ಅಪರಾಧಿಗಳನ್ನು ಸೆರೆ ಹಿಡಿಯದೇ ಇದ್ದರೆ ನಾವು ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ. ಅನ್ಯಾಯವಿದ್ದೆಡೆ ನಮ್ಮ ದನಿ ಖಂಡಿತವಾಗಿಯೂ ಕೇಳುವುದು’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News