ಸಮಾಜದಲ್ಲಿ ಶಾಂತಿ ಸಾಮರಸ್ಯ ಮೂಡಿಸಬೇಕು: ಕೇಮಾರು ಈಶ ವಿಠಲ ಸ್ವಾಮೀಜಿ

Update: 2019-05-27 11:40 GMT

ಪಡುಬಿದ್ರಿ: ದೇಶದೆಲ್ಲೆಡೆ ಜಾತೀಯತೆ, ಅಸಮಾನತೆ, ಮತೀಯ ಗಲಭೆಗಳಿಂದ ಕಲುಷಿತಗೊಂಡಿರುವ ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಮತ್ತು ಜಾತ್ಯಾತೀತತೆಯ ಸಂದೇಶವನ್ನು ಸಾರಿ ಸಮಾಜದಲ್ಲಿ ಶಾಂತಿ-ಸಾಮರಸ್ಯವನ್ನು ಮೂಡಿಸಬೇಕಾಗಿದೆ ಎಂದು ಕೇಮಾರು  ಸಾಂದೀಪನಿ ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿ ಅಭಿಪ್ರಾಯಪಟ್ಟರು. 

ಮಾಜಿ ಸಚಿವ ಮುಖಂಡ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ, ಕಾಪು ವಿಧಾನಸಭಾ ಕ್ಷೇತ್ರದ  ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಸಹಯೋಗದೊಂದಿಗೆ ರವಿವಾರ ನಡೆದ 'ಸೌಹಾರ್ದ ಇಫ್ತಾರ್ ಕೂಟ'ದಲ್ಲಿ ಮಾತನಾಡಿದರು. 
ಮೂಳೂರಿನ ಸುನ್ನಿ ಎಜುಕೇಶನ್ ಸೆಂಟರ್‍ನ ವ್ಯವಸ್ಥಾಪಕ ಮುಸ್ತಫಾ ಸಅದಿ ಮಾತನಾಡಿ, ಭಾರತಾಂಬೆಯ ಮಕ್ಕಳಾದ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸೌಹಾರ್ದತೆಯ ಜೊತೆಗೆ, ಪರಸ್ಪರ ಪ್ರೀತಿ-ಪ್ರೇಮದಿಂದ ಅನ್ಯೋನ್ಯತೆ ಯಿಂದ ಬಾಳಿದರೆ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿ-ಸಾಮರಸ್ಯ ನೆಲೆಸುತ್ತದೆ ಎಂದರು.

ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಲ್ಬನ್ ರೊಡ್ರಿಗಸ್ ಮಾತನಾಡಿ, ರಂಜಾನ್ ಉಪಾವಸ ಆಚರಿಸುವುದರಿಂದ ದೇಹ ಮತ್ತು ಆತ್ಮ ಎರಡೂ ಕೂಡ ಶುದ್ಧಿಯಾಗುತ್ತದೆ. ಅನ್ನಹಾರ ತ್ಯಜಿಸುವುದರಿಂದಾಗಿ ಬಡವರ ಹಸಿವು ಮತ್ತು ದಾಹದ ಅರಿವು ಮನವರಿಕೆಯಾಗುತ್ತದೆ ಎಂದರು. 

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್, ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ  ಯೋಗೀಶ್ ಶೆಟ್ಟಿ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕೆ. ಪಿ. ಇಬ್ರಾಹಿಂ, ಕಾಪು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಾದಿಕ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ್ ಶೆಟ್ಟಿ, ಶಿವಾಜಿ ಪಿ.ಸುವರ್ಣ,  ಮನ್ಹರ್ ಇಬ್ರಾಹಿಂ, ಎಚ್. ಅಬ್ದುಲ್ಲಾ,  ವಿಲ್ಸನ್ ರೊಡ್ರಿಗಸ್, ಸರಸು ದಯಾನಂದ್ ಬಂಗೇರ, ಐಡ ಗಿಬ್ಬ ಡಿಸೋಜ, ಕೆ. ಎಚ್. ಉಸ್ಮಾನ್, ಗುಲಾಂ ಅಹ್ಮದ್ ಹೆಜಮಾಡಿ, ಶಬೀ ಖಾಝಿ, ಅಬ್ದುಲ್ ರಹಿಮಾನ್ ಕನ್ನಂಗರ್, ಇಸ್ಮಾಯಿಲ್ ಆತ್ರಾಡಿ, ನಾಗೇಶ್ ಉದ್ಯಾವರ, ರಿಯಾಜ್ ಪಳ್ಳಿ ,ಫಾರೂಕ್ ಚಂದ್ರನಗರ, ದೀಪಕ್ ಎರ್ಮಾಳ್,ಮನ್ಸೂರ್, ಇಲಿಯಾಸ್,ಆಸಿಫ್,ನಾಗೇಶ್ ಸುವರ್ಣ, ಹರೀಶ್ ನಾಯಕ್,ಲಕ್ಷ್ಮೀಶ ತಂತ್ರಿ  ಉಪಸ್ಥಿತರಿದ್ದರು. 

ಸಭಾಕಾರ್ಯಕ್ರಮದ ನಂತರ ಇಫ್ತಾರ್ ಹಾಗೂ ಸಹಭೋಜನ ಕಾರ್ಯಕ್ರಮವೂ ನಡೆಯಿತು.  ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನಚಂದ್ರ ಸುವರ್ಣ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಅಮೀರ್ ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News