​ನೆಹರೂ ಕೊಡುಗೆಯನ್ನು ದೇಶ ಎಂದೂ ಮರೆಯಲಾಗದು: ರಮಾನಾಥ ರೈ

Update: 2019-05-27 11:49 GMT

ಮಂಗಳೂರು, ಮೇ 27: ಪಂಚವಾರ್ಷಿಕ ಯೋಜನೆ ಅನುಷ್ಠಾನ, ಪಂಚಶೀಲ ತತ್ವದ ಪ್ರತಿಪಾದನೆ, ಅಲಿಪ್ತ ರಾಷ್ಟ್ರ ನೀತಿಗೆ ಬುನಾದಿ ಇತ್ಯಾದಿ ಚಿಂತನೆ, ಯೋಜನೆಗಳಿಂದ ಆಧುನಿಕ ಭಾರತದ ಶಿಲ್ಪಿ ಎಂದೇ ಪರಿಗಣಿಸಲ್ಪಟ್ಟಿದ್ದ ಜವಹಾರ್‌ಲಾಲ್ ನೆಹರೂ ಅವರ ಕೊಡುಗೆಗಳನ್ನು ದೇಶ ಎಂದೂ ಮರೆಯದು ಎಂದು ಮಾಜಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ಜರುಗಿದ ದೇಶದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರ್‌ಲಾಲ್ ನೆಹರೂರವರ ಪುಣ್ಯತಿಥಿಯ ವರ್ಷಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹಸಿರು ಕ್ರಾಂತಿಯ ಜೊತೆಗೆ ಕೈಗಾರಿಕಾ ಕ್ರಾಂತಿಗೂ ಸಮಾನ ಅವಕಾಶ ನೀಡಿದ ನೆಹರೂ ಅಭಿವೃದ್ಧಿಯ ಹರಿಕಾರರಾಗಿದ್ದರು. ಗಾಂಧೀಜಿಯ ಹತ್ಯೆಯನ್ನು ವೈಭೀಕರಿಸುವವರೇ ಸಂಸತ್ತಿಗೆ ಪ್ರವೇಶಿಸುತ್ತಿರುವುದು ದುರದೃಷ್ಟಕರ ಎಂದರು.

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿದರು.

ಸಭೆಯಲ್ಲಿ ಮಾಜಿ ಜಿಲ್ಲಾ ಹಂಗಾಮಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಸುರೇಶ್ ಶೆಟ್ಟಿ, ಭಾಸ್ಕರ್ ರಾವ್, ಹಿಲ್ಡಾ ಆಳ್ವಾ, ಟಿ.ಕೆ. ಸುಧೀರ್, ವಿಶ್ವಾಸ್ ಕುಮಾರ್ ದಾಸ್, ಕೇಶವ ಸನೀಲ್, ಜಯಶೀಲಾ ಅಡ್ಯಂತಾಯ, ನವೀನ್ ಡಿಸೋಜ, ಬಿ.ಎಂ. ಭಾರತಿ, ಪ್ರೇಮ್ ಬಳ್ಳಾಲ್‌ಭಾಗ್, ಮರಿಯಮ್ಮ ಥೋಮಸ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಯು.ಎಚ್ ಖಾಲಿದ್, ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News