ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಕೈಬಿಡಲು ಸಿಪಿಎಂ ಒತ್ತಾಯ

Update: 2019-05-27 14:51 GMT

ಮಂಗಳೂರು, ಮೇ 27: ಪ್ರಸಕ್ತ ವರ್ಷದಿಂದ ರಾಜ್ಯದ ಆಯ್ದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದಾಗಿ ರಾಜ್ಯ ಸರಕಾರ ಪ್ರಕಟಿಸಿದ್ದು, ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಕೈಬಿಡಬೇಕು ಎಂದು ಸಿಪಿಎಂ ಒತ್ತಾಯಿಸಿದೆ.

ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮ ಸರಕಾರಿ ಪ್ರಾಥಮಿಕ ಶಾಲೆ ಆರಂಭಿಸುವುದನ್ನು ವಿರೋಧಿಸಿ ಸಿಪಿಎಂ ದ.ಕ.ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನಾ ಪ್ರದರ್ಶನ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂನ ಜಿಲ್ಲಾ ಸಮಿತಿ ಸದಸ್ಯ ವಾಸುದೇವ ಉಚ್ಚಿಲ, ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಸಂಪೂರ್ಣಗೊಂಡರೆ, ಕನ್ನಡ ಸಂಸ್ಕೃತಿಯನ್ನಾಗಲೀ, ಪ್ರಾದೇಶಿಕ ಸಂಸ್ಕೃತಿ ಆಚರಣೆಯನ್ನಾಗಲೀ ಅರ್ಥ ಮಾಡಿಕೊಳ್ಳುವವರೇ ಇಲ್ಲದಂತಾಗುತ್ತದೆ. ಬಳಿಕ ನಮ್ಮ ಸಂಸ್ಕತಿ ಎಂದು ಹೇಳಿಕೊಳ್ಳಲು ನಮಗೆ ಏನೂ ಉಳಿದಿರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ದೇಶವು ಸ್ವಾತಂತ್ರ್ಯ ಹೊಂದಿದ ಬೆನ್ನಿಗೇ ದೇಶಾದ್ಯಂತ ಭಾಷಾವಾರು ಪ್ರಾಂತ್ಯ ರಚನೆ ಆಗ್ರಹಿಸಿ ಚಳವಳಿಗಳು ನಡೆದವು. ಪ್ರಾದೇಶಿಕ ಹಾಗೂ ಮಾತೃಭಾಷೆಗಳಿಗೆ ಶಿಕ್ಷಣ ಹಾಗೂ ಆಡಳಿತ ನಡೆಯಬೇಕೆಂಬುದು ಈ ಚಳವಳಿಗಳ ಆಶಯವಾಗಿದ್ದು, ಭಾರತವು ಹೊಸದಾಗಿ ರೂಪಿಸಿದ್ದ ಸಂವಿಧಾನ ಅಂಗೀಕರಿಸಿದ ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಒಕ್ಕೂಟ ತತ್ತವನ್ನು ಇದು ಆಧರಿಸಿತ್ತು. ಇದಕ್ಕೆ ಆ ದಿನಗಳಲ್ಲಿ ಪ್ರಾದೇಶಿಕ ಭಾಷಾಭಿಮಾನಿಗಳೂ ಕಮ್ಯೂನಿಸ್ಟರು ಬೆನ್ನೆಲುಬಾಗಿದ್ದರು ಎಂದರು.

ಕನ್ನಡ, ಮಲಯಾಳ, ತೆಲುಗು, ಮರಾಠಿ, ಗುಜರಾತಿ ಇತ್ಯಾದಿ ಭಾಷೆಗಳು ಹೆಚ್ಚಾಗಿ ಮಾತನಾಡಲ್ಪಡುವ ಪ್ರದೇಶಗಳು ಭಾಷಾವಾರು ರಾಜ್ಯಗಳಾಗಿ ರೂಪುಗೊಳ್ಳಬೇಕೆಂದು ಈ ಚಳವಳಿಯ ಆಗ್ರಹವಾಗಿತ್ತು. ಈ ಎಲ್ಲ ಹೋರಾಟಗಳು ಕೇಂದ್ರದ ಅಂದಿನ ಚುನಾಯಿತ ಪ್ರಥಮ ಸರಕಾರದ ಮೇಲೆ ಒತ್ತಡಗಳನ್ನು ಬೀರಿದರು. ಕೇಂದ್ರ ಸರಕಾರವು ಜನರ ಪ್ರಜಾಸತ್ತಾತ್ಮಕ ಆಶಯಗಳಿಗೆ ಬಾಗಿ, ಭಾಷಾವಾರು ರಾಜ್ಯಗಳಿಗೆ ಅನುಮತಿ ನೀಡಿತು. ಪರಿಣಾಮ ದೇಶದ ಎಲ್ಲೆಡೆ ಭಾಷಾವಾರು ರಾಜ್ಯಗಳು ರಚಿತವಾದವು ಎಂದು ಹೇಳಿದರು.

1956 ನವಂಬರ್ 1 ರಂದು ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳೂ ಒಂದಾಗಿ ಮೈಸೂರು ರಾಜ್ಯ ರಚನೆಯಾಯಿತು. ಕನ್ನಡ ಭಾಷೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಮಾಧ್ಯಮವಾಗಿ ಚಲಾವಣೆಗೆ ಬಂದಿತು. ಮುಂದಿನ ಹಂತದಲ್ಲಿ ಆಡಳಿತವೂ ಕನ್ನಡದಲ್ಲಿರಬೇಕೆಂಬ ಧೋರಣೆ ಚಾಲ್ತಿಗೆ ಬಂತು. ಆದಾಗ್ಯೂ ಶಾಲಾ ಶಿಕ್ಷಣದಲ್ಲಿ ಇತರ ಮಾತೃಭಾಷಾ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿಯೂ ಕಲಿಸದಿರುವ ಖಾಸಗಿ ಶಾಲೆಗಳಿದ್ದವು. ಇದರ ವಿರುದ್ಧವಾಗಿ 1982-83ರ ಅವಧಿಯಲ್ಲಿ ಪ್ರಸಿದ್ಧವಾಗಿ ಗೋಕಾಕ್ ಚಳವಳಿ ನಡೆದು, ಕನ್ನಡವನ್ನು ಶಾಲೆಗಳಲ್ಲಿ ಒಂದು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿತು ಎಂದು ವಾಸುದೇವ ಉಚ್ಚಿಲ ವಿವರಿಸಿದರು.

1990ರಿಂದ ಇತ್ತೀಚೆಗೆ ಆರ್ಥಿಕತೆಯ ಖಾಸಗೀಕರಣದ ಜೊತೆಗೆ ಶಿಕ್ಷಣದ ಖಾಸಗೀಕರಣವೂ ರಾಜ್ಯದಲ್ಲಿ ಮಾತ್ರವಲ್ಲ, ದೇಶಾದ್ಯಂತ ಹೆಚ್ಚಿದೆ. ಶಿಕ್ಷಣವು ವ್ಯಾಪಾರೀಕರಣಗೊಂಡಿದೆ. ಕಾರ್ಪೊರೇಟ್ ಒತ್ತಡಗಳಿಂದ ಸರಕಾರಿ ಶಾಲೆಗಳಿಗೆ ಸಮಾನಾಂತರವಾಗಿ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳು ಪಟ್ಟಣ, ಹಳ್ಳಿಗಳೆನ್ನದೆ ವಿಸ್ತರಿಸುತ್ತಿವೆ. ಇಂಗ್ಲಿಷ್ ಮಾಧ್ಯಮಕ್ಕೆ ರಾಜ್ಯದ ಎಲ್ಲ ಸರಕಾರಗಳೂ ಪ್ರೋತ್ಸಾಹಿಸಿದ್ದರ ಫಲವಾಗಿ ಸರಕಾರಿ ಶಾಲೆಗಳು ದುರ್ಬಲವಾಗಿವೆ. ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಾಲಿನಿಂದ ರಾಜ್ಯದ ಹಲವಾರು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ಆರಂಭಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ ಕಾರ್ಯಾರಂಭಿಸಿದೆ. ಇದು ಕಾರ್ಪೊರೇಟ್ ಹಿತಗಳ ರಕ್ಷಣೆಗಾಗಿ, ಬಡಜನರು ಶಿಕ್ಷಣ ಪಡೆಯುವ ಸರಕಾರಿ ಶಾಲೆಗಳನ್ನು ಇನ್ನಷ್ಟು ದುರ್ಬಲಗೊಳಿಸುವ ಸಂಚಾಗಿದೆ ಎಂದು ಆರೋಪಿಸಿದರು.

ಕೇರಳ ರಾಜ್ಯವು ಕಳೆದ ಮೂರು ವರ್ಷಗಳಿಂದ ಸರಕಾರಿ ಶಾಲೆಗಳನ್ನು ಬಲಿಷ್ಟಗೊಳಿಸುವ ಕಾರ್ಯಯೋಜನೆ ಹಾಕಿಕೊಂಡಿದ್ದು, ಅದನ್ನು ಅಧ್ಯಯನ ಮಾಡಿಯಾದರೂ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಬೇಕೆಂದು ವಾಸುದೇವ ಉಚ್ಚಿಲ ಆಗ್ರಹಿಸಿದರು.
ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಇಂಗ್ಲಿಷ್‌ನ್ನು ಭಾಷೆಯಾಗಿ ಸಮರ್ಥವಾಗಿ ಕಲಿಸುವ ಶಿಕ್ಷಕರನ್ನು ನೇಮಿಸಬೇಕು. ಆದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಕೈಬಿಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಇಂಗ್ಲಿಷ್ ಮಾಧ್ಯಮದ ಜೊತೆಗೆ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಸಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ. ಸರಕಾರದ ಈ ಯೋಜನೆಯಿಂದ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಐಸಿಡಿಎಸ್ ಕಾರ್ಯಕ್ರಮಕ್ಕೆ ಬಾಧೆ ಉಂಟಾಗಲಿದೆ ಎಂದು ಹೇಳಿದರು.

ಪೌಷ್ಠಿಕ ಆಹಾರ ಹಾಗೂ ಆರೋಗ್ಯ ರಕ್ಷಣೆಯಂಥ ಅಗತ್ಯ ಕಾರ್ಯಕ್ರಮಗಳಿಂದ ಮಕ್ಕಳು ಶಾಲೆಯ ಎಲ್‌ಕೆಜಿಗಳಿಗೆ ಸೇರಿಕೊಳ್ಳುವುದರಿಂದ ವಂಚಿತರಾಗುವರು. ಎಲ್‌ಕೆಜಿ, ಯುಕೆಜಿಗಳನ್ನು ಅಂಗನವಾಡಿಗಳಲ್ಲೇ ಆರಂಭಿಸಿ ಐಸಿಡಿಎಸ್ ಯೋಜನೆಯನ್ನೂ ಉಳಿಸಿಕೊಳ್ಳಬೇಕೆಂದು ವಸಂತ ಆಚಾರಿ ಆಗ್ರಹಿಸಿದರು.

ಸಿಪಿಎಂ ಜಿಲ್ಲಾ ಮುಖಂಡರಾದ ಯು.ಬಿ.ಲೋಕಯ್ಯ, ಕೃಷ್ಣಪ್ಪ ಸಾಲ್ಯಾನ್ ಹಾಗೂ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News