ದೇಶದ ಹಿತಾಸಕ್ತಿಗೆ ಯಾವ ತ್ಯಾಗ ಮಾಡಲೂ ಸಿದ್ಧ: ಸೋನಿಯಾ ಗಾಂಧಿ
ರಾಯ್‌ಬರೇಲಿ, ಮೇ.27: ದೇಶದ ಮೂಲ ಮೌಲ್ಯಗಳನ್ನು ರಕ್ಷಿಸಲು ಯಾವ ತ್ಯಾಗ ಮಾಡಲು ಹಿಂಜರಿಯುವುದಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.
ತಾನು ಪ್ರತಿನಿಧಿಸುವ ಕ್ಷೇತ್ರವಾದ ರಾಯ್‌ಬರೇಲಿಯ ಜನರನ್ನು ಕುರಿತು ಬರೆದಿರುವ ಪತ್ರದಲ್ಲಿ ಸೋನಿಯಾ ಗಾಂಧಿ, ತನ್ನ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ನಾಯಕರಿಗೂ ಧನ್ಯವಾದ ಸೂಚಿಸಿದ್ದಾರೆ. ದೇಶದ ಮೂಲ ಮೌಲ್ಯಗಳನ್ನು ರಕ್ಷಿಸಲು ಮತ್ತು ಕಾಂಗ್ರೆಸ್ ಹಿರಿಯರ ಸಂಪ್ರದಾಯವನ್ನು ಎತ್ತಿಹಿಡಿಯಲು ನಾನು ನನ್ನಲ್ಲಿರುವ ಯಾವುದನ್ನು ತ್ಯಾಗ ಮಾಡಲೂ ಹಿಂಜರಿಯುವುದಿಲ್ಲ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ. ಮುಂದಿನ ದಿನಗಳು ಬಹಳ ಕಠಿಣವಾಗಲಿವೆ ಎನ್ನುವುದು ನನಗೆ ತಿಳಿದಿದೆ. ಆದರೆ ನಿಮ್ಮ ಬೆಂಬಲ ಮತ್ತು ವಿಶ್ವಾಸದ ಬಲದಿಂದ ಕಾಂಗ್ರೆಸ್ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಲಿದೆ ಎನ್ನುವ ಭರವಸೆ ನನಗಿದೆ ಎಂದು ಗಾಂಧಿ ತಿಳಿಸಿದ್ದಾರೆ.
ಪ್ರತಿ ಲೋಕಸಭಾ ಚುನಾವಣೆಯಂತೆ ಈ ಬಾರಿಯೂ ನೀವು ನನ್ನ ಮೇಲೆ ನಂಬಿಕೆಯಿಟ್ಟಿದ್ದೀರಿ.ನನ್ನನ್ನು ಗೆಲ್ಲಿಸಲು ಶ್ರಮಪಟ್ಟ ಕಾಂಗ್ರೆಸ್ ಕಾರ್ಯಕರ್ತರು, ಎಸ್‌ಪಿ, ಬಿಎಸ್‌ಪಿ ಮತ್ತು ಸ್ವಾಭಿಮಾನ ದಳದ ಗೆಳೆಯರಿಗೆ ಧನ್ಯವಾದಗಳು ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಬರೆದಿದ್ದಾರೆ.