ಸ್ಥಳೀಯ ರಾಜಕೀಯ ವೈರತ್ವವೇ ಬಿಜೆಪಿ ಕಾರ್ಯಕರ್ತನ ಹತ್ಯೆಗೆ ಕಾರಣ: ಪೊಲೀಸ್

Update: 2019-05-27 17:27 GMT

ಹೊಸದಿಲ್ಲಿ, ಮೇ.27: ಅಮೇಠಿಯ ಮಾಜಿ ಗ್ರಾಮ ಮುಖ್ಯಸ್ಥ ಮತ್ತು ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್ ಹತ್ಯೆಗೆ ಸ್ಥಳೀಯ ರಾಜಕೀಯ ವೈರತ್ವವೇ ಕಾರಣ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಸಿಂಗ್, ಇತ್ತೀಚೆಗೆ ಕೊನೆಯಾದ ಲೋಕಸಭಾ ಚುನಾವಣೆಯಲ್ಲಿ ಅಮೇಠಿಯ ಬಿಜೆಪಿ ಅಭ್ಯರ್ಥಿ ಸ್ರ್ಮತಿ ಇರಾನಿ ಪರ ಪ್ರಚಾರ ನಡೆಸುತ್ತಿದ್ದರು. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಇನ್ನಿಬ್ಬರನ್ನು ಶೀಘ್ರದಲ್ಲೇ ಬಂಧಸಲಾಗುವುದು. ಎಲ್ಲ ಸಾಕ್ಷಿಗಳನ್ನು ಪರಿಶೀಲಿಸಿದಾಗ ಇದು ಸ್ಥಳೀಯ ರಾಜಕೀಯ ದ್ವೇಷದಿಂದ ನಡೆದಿರುವ ಹತ್ಯೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಒ.ಪಿ ಸಿಂಗ್ ತಿಳಿಸಿದ್ದಾರೆ.

ಸುರೇಂದ್ರ ಸಿಂಗ್ ಅವರನ್ನು ಶನಿವಾರ ರಾತ್ರಿ ಅವರ ಮನೆಯ ಮುಂದೆ ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಸಿಂಗ್ ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಪೊಲೀಸರು ಇದು ವೈಯಕ್ತಿಕ ಕಾರಣದಿಂದ ನಡೆದಿರುವ ಹತ್ಯೆ ಎಂದು ತಿಳಿಸಿದ್ದರೂ ಸಿಂಗ್ ಕುಟುಂಬ ಇದು ರಾಜಕೀಯ ಹತ್ಯೆಯಾಗಿದೆ ಎಂದು ಆರೋಪಿಸಿದ ನಂತರ ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದರು. ರವಿವಾರ ಮಧ್ಯಾಹ್ನ ಅಮೇಠಿಯ ಬರೌಲಿಯ ಗ್ರಾಮಕ್ಕೆ ತೆರಳಿದ ಸಂಸದೆ ಸ್ರ್ಮತಿ ಇರಾನಿ, ಸುರೇಂದ್ರ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News