ಉತ್ತರ ಪ್ರದೇಶ: 8 ಕ್ಷೇತ್ರಗಳಲ್ಲಿ ಬಿಜೆಪಿಯ ವಿಜಯದ ಅಂತರ ಕಾಂಗ್ರೆಸ್ ಅಭ್ಯರ್ಥಿ ಪಡೆದ ಮತಗಳಿಗಿಂತ ಕಡಿಮೆ

Update: 2019-05-28 04:14 GMT

ಲಕ್ನೋ, ಮೇ 28: ಹದಿನೇಳನೇ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 60 ಕಡೆ ಠೇವಣಿ ಕಳೆದುಕೊಂಡಿದ್ದು, ಕೇವಲ ಮೂರು ಕ್ಷೇತ್ರಗಳಲ್ಲಷ್ಟೇ ಎರಡನೇ ಸ್ಥಾನ ಪಡೆಯಲು ಸಾಧ್ಯವಾಗಿದೆ. ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಅಥವಾ ಬಿಜೆಪಿಗೆ ಮುಳುವಾಗುತ್ತದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೀಡಿದ ಹೇಳಿಕೆ ಸುಳ್ಳಾಗಿದೆ. ವಾಸ್ತವವಾಗಿ ಕಾಂಗ್ರೆಸ್ ಪಕ್ಷ ಇಲ್ಲಿ ಎಸ್ಪಿ-ಬಿಎಸ್ಪಿ-ಆರ್‌ಎಲ್‌ಡಿ ಮೈತ್ರಿಕೂಟಕ್ಕೆ ಹಾನಿ ಮಾಡಿದ್ದು, ಕನಿಷ್ಠ ಹತ್ತು ಕ್ಷೇತ್ರಗಳಲ್ಲಿ ಈ ಕೂಟದ ಗೆಲುವಿನ ಅವಕಾಶವನ್ನು ಕಸಿದುಕೊಂಡಿದೆ.

ಬಡೌನ್, ಬಂಡಾ, ಬಾರಾಬಂಕಿ, ಬಸ್ತಿ, ದೌರಾಹ್ರ, ಮೀರತ್, ಸಂತ ಕಬೀರ ನಗರ ಮತ್ತು ಸುಲ್ತಾನ್‌ಪುರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಕಾಂಗ್ರೆಸ್ ಅಭ್ಯರ್ಥಿಗಳು ಪಡೆದ ಮತಕ್ಕಿಂತ ಕಡಿಮೆ ಎನ್ನುವುದು ಫಲಿತಾಂಶಗಳ ವಿವರವಾದ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಇದಲ್ಲದೇ ಕಾಂಗ್ರೆಸ್ ಮಿತ್ರ ಪಕ್ಷವಾದ ಜನ್ ಅಧಿಕಾರ ಪಕ್ಷ ಮಚ್ಲಿಶಹರ್ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಇಲ್ಲಿ ಕೂಡಾ ಈ ಪಕ್ಷದ ಅಭ್ಯರ್ಥಿಗೆ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತ ಅಧಿಕ ಮತ ಸಿಕ್ಕಿದೆ. ಸೀತಾಪುರದಲ್ಲಿ ಬಿಜೆಪಿ ಗೆಲುವಿನ ಅಂತರ 1 ಲಕ್ಷ ಆಗಿದ್ದು, ಕಾಂಗ್ರೆಸ್ ಅಭ್ಯರ್ಥಿ 96,018 ಮತಗಳನ್ನು ಪಡೆದಿದ್ದು, ಇದು ಮೈತ್ರಿಕೂಟದ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದೆ.

ಎಸ್ಪಿ-ಬಿಎಸ್ಪಿ ಕೂಟದಿಂದ ಹೊರಬಿದ್ದ ಬಳಿಕ, ಕಾಂಗ್ರೆಸ್ ಪಕ್ಷ ಸಾಂಪ್ರದಾಯಿಕವಾಗಿ ಬಿಜೆಪಿಗೆ ಬೆಂಬಲ ನೀಡುವ ಮೇಲ್ವರ್ಗದ ಮತಗಳನ್ನು ವಿಭಜಿಸಲಿದೆ ಎಂದು ವಿಶ್ಲೇಷಕರು ವಾದಿಸಿದ್ದರು. ಆದರೆ ಅದು ನಿಜವಾಗಿಲ್ಲ. ಕಾಂಗ್ರೆಸ್ ಪಕ್ಷ ಅಮೇಥಿ, ಕಾನ್ಪುರ ಮತ್ತು ಫತೇಪುರ ಸಿಕ್ರಿ ಹೀಗೆ ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರ ದ್ವಿತೀಯ ಸ್ಥಾನಿಯಾಗಿದೆ. ಇಲ್ಲಿ ಕ್ರಮವಾಗಿ ರಾಹುಲ್‌ ಗಾಂಧಿ, ಶ್ರೀಪ್ರಕಾಶ್ ಜೈಸ್ವಾಲ್ ಹಾಗೂ ರಾಜ್ ಬಬ್ಬರ್ ಬಿಜೆಪಿ ವಿರುದ್ಧ ಪರಾಭವಗೊಂಡಿದ್ದರು.

ಈ ಬಾರಿ 80 ಕ್ಷೇತ್ರಗಳ ಪೈಕಿ ಬಿಜೆಪಿ 64 ಸ್ಥಾನಗಳನ್ನು ಗೆದ್ದಿದೆ. ಹಿಂದಿನ ಚುನಾವಣೆಯಲ್ಲಿ ಶೇಕಡ 42.3 ಮತಗಳನ್ನು ಪಡೆದಿದ್ದ ಬಿಜೆಪಿಯ ಮತ ಗಳಿಕೆ ಈ ಬಾರಿ ಶೇಕಡ 49.6ಕ್ಕೆ ಹೆಚ್ಚಿದೆ. ಸಮಾಜವಾದಿ ಪಕ್ಷದ ಮತ ಪ್ರಮಾಣ ಶೇಕಡ 22.2ರಿಂದ ಶೇಕಡ 18ಕ್ಕೆ ಕುಸಿದ್ದು, ಬಿಎಸ್ಪಿ ಮತಗಳಿಕೆ ಶೇಕಡ 19.6ರಿಂದ 19.3ಕ್ಕೆ ಕುಸಿದಿದೆ.

ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಗೆಲುವಿನ ಅಂತರ ಮೈನ್‌ಪುರಿಯಲ್ಲಿ ಗಣನೀಯವಾಗಿ ಕಡಿಮೆಯಾಗಿದ್ದು, ಕಳೆದ ಉಪಚುನಾವಣೆಯಲ್ಲಿ ಗೆದ್ದ ಕೈರಾನಾ, ಗೋರಖ್‌ಪುರ ಮತ್ತು ಫೂಲ್‌ಪುರ ಕ್ಷೇತ್ರಗಳನ್ನು ಎಸ್ಪಿ ಕಳೆದುಕೊಂಡಿದೆ. ಆರ್‌ಎಲ್‌ಡಿ ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳನ್ನೂ ಸೋತಿದ್ದು, ಪಕ್ಷದ ಮುಖ್ಯಸ್ಥ ಅಜಿತ್ ಸಿಂಗ್ ಹಾಗೂ ಪುತ್ರ ಜಯಂತ್ ಚೌಧರಿ ಕೂಡಾ ಸೋಲಿನ ರುಚಿ ಕಂಡಿದ್ದಾರೆ. ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್ ಎನಿಸಿದ ಜಾಟ್ ಸಮುದಾಯ ಕೂಡಾ ಈ ಬಾರಿ ಬಿಜೆಪಿ ಪರ ಒಲವು ತೋರಿರುವುದು ಇದರಿಂದ ಸ್ಪಷ್ಟವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News