ರಾಹುಲ್ ರಾಜೀನಾಮೆ ನಿರ್ಧಾರ ಆತ್ಮಹತ್ಯೆಗೆ ಸಮ: ಲಾಲೂ ಪ್ರಸಾದ್ ಯಾದವ್

Update: 2019-05-28 09:29 GMT

  ಹೊಸದಿಲ್ಲಿ, ಮೇ 28: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ ಕಾರಣ ರಾಜೀನಾಮೆ ನಿರ್ಧಾರಕ್ಕೆ ಮುಂದಾಗಿರುವ ರಾಹುಲ್ ಗಾಂಧಿ ಅವರ ನಿಲುವು ಆತ್ಮಹತ್ಯೆ ಮಾಡಿಕೊಂಡಂತೆ. ಮಾತ್ರವಲ್ಲ ಬಿಜೆಪಿ ಹೆಣೆಗೆ ಬಲೆಗೆ ಬಿದ್ದಂತಾಗುತ್ತದೆ ಎಂದು ಜೈಲುವಾಸ ಅನುಭವಿಸುತ್ತಿರುವ ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಕೊನೆಗೊಂಡ ಲೋಕಸಭಾ ಚುನಾವಣೆಯಲ್ಲಿ 542 ಸದಸ್ಯ ಬಲದ ಸಂಸತ್‌ನಲ್ಲಿ ಕಾಂಗ್ರೆಸ್ ಕೇವಲ 52 ಸೀಟು ಗೆದ್ದುಕೊಂಡಿದೆ. ಮೋದಿ ನೇತೃತ್ವದ ಎನ್‌ಡಿಎ 352 ಸೀಟುಗಳನ್ನು ಗೆದ್ದುಕೊಂಡಿತ್ತು.

 ‘‘ರಾಹುಲ್ ಅವರ ರಾಜೀನಾಮೆ ಕೊಡುಗೆ ಆತ್ಮಹತ್ಯೆಗೆ ಸಮ. ವಿಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಏಕರೀತಿಯ ಗುರಿ ಹೊಂದಿದ್ದವು. ಆದರೆ, ಅದನ್ನು ರಾಷ್ಟ್ರೀಯ ವಿಚಾರವಾಗಿ ನಿರೂಪಿಸಲು ವಿಫಲವಾದವು. ನಿರ್ದಿಷ್ಟ ಚುನಾವಣಾ ಫಲಿತಾಂಶ ಭಾರತದಂತಹ ವೈವಿದ್ಯಮಯ ರಾಷ್ಟ್ರದಲ್ಲಿ ಸತ್ಯವನ್ನು ಎಂದಿಗೂ ಬದಲಾಯಿಸುವುದಿಲ್ಲ’’ ಎಂದು ಮೇವು ಹಗರಣದಲ್ಲಿ ಸಿಲುಕಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲೂ ಪ್ರಸಾದ್ ‘ದಿ ಟೆಲಿಗ್ರಾಫ್’ಗೆ ತಿಳಿಸಿದ್ದಾರೆ.

ರಾಹುಲ್ ಗಾಂಧಿ ರಾಜೀನಾಮೆ ನೀಡಿದರೆ ಬಿಜೆಪಿ ಹೆಣೆಗೆ ಬಲೆಗೆ ಬಿದ್ದಂತಾಗುತ್ತದೆ ಎಂದು ವಿಶ್ಲೇಷಿಸಿದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್,‘‘ರಾಹುಲ್ ಬದಲಿಗೆ ಗಾಂಧಿ-ನೆಹರೂ ಕುಟುಂಬಕ್ಕೆ ಹೊರತಾದವರು ಅಧ್ಯಕ್ಷ ಸ್ಥಾನಕ್ಕೆ ಬಂದರೆ, ನರೇಂದ್ರ ಮೋದಿ ಹಾಗೂ ಅಮಿತ್‌ಶಾ ಜೋಡಿ ಕಾಂಗ್ರೆಸ್‌ನ ಹೊಸ ನಾಯಕನನ್ನು ರಾಹುಲ್ ಹಾಗೂ ಸೋನಿಯಾ ಗಾಂಧಿ ಅವರ ಕೈಗೊಂಬೆಯಾಗಿದ್ದಾರೆ ಎಂದು ಬಣ್ಣ ಬಳಿಯಲು ಆರಂಭಿಸುತ್ತಾರೆ. ರಾಹುಲ್ ತನ್ನ ರಾಜಕೀಯ ವಿರೋಧಿಗಳಿಗೆ ಏಕೆ ಇಂತಹ ಅವಕಾಶ ನೀಡಬೇಕು’’ ಎಂದು ಪ್ರಶ್ನಿಸಿದ್ದಾರೆ.

ಎಲ್ಲ ವಿರೋಧ ಪಕ್ಷಗಳು ಸಾಮೂಹಿಕ ಹೊಣೆಗಾರಿಕೆ ಹೊರಬೇಕು ಹಾಗೂ ಎಲ್ಲಿ ತಪ್ಪಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸೋಲಿಗೆ ಕಾರಣ  ಸಿಗದಿರಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News