ಗೆಳತಿಗೆ ನೆರವಾಗಲು ಎಂಬಿಎ ಪ್ರಶ್ನೆಪತ್ರಿಕೆ ಸೋರಿಕೆಗೆ ಯತ್ನಿಸಿದವನ ಬಂಧನ

Update: 2019-05-28 17:47 GMT

ಲಕ್ನೊ, ಮೇ 28: ಗೆಳತಿಗೆ ನೆರವಾಗುವ ಉದ್ದೇಶದಿಂದ ಎಂಬಿಎ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ ನಡೆದಿದೆ.

 ಬಿಎಸ್ಪಿಯ ಪಟಿಯಾಲಿ ನಗರದ ಸಂಚಾಲಕ ಎಂಬ ನಾಮಫಲಕ ಹೊಂದಿದ್ದ ಕಾರಿನಲ್ಲಿ ಸುತ್ತಾಡುತ್ತಾ, ಪ್ರಭಾವೀ ರಾಜಕಾರಣಿಯಂತೆ ಫೋಸ್ ನೀಡುತ್ತಿದ್ದ ಫಿರೋಝ್ ಆಲಂ ಅಲಿಯಾಸ್ ರಾಜಾ ಎಂಬಾತ ಬಂಧಿತ ವ್ಯಕ್ತಿ. ಈತನ ಗೆಳತಿ ಎಂಬಿಎ ಪರೀಕ್ಷೆ ಬರೆಯುತ್ತಿದ್ದಳು. ಈಕೆಗೆ ನೆರವಾಗುವ ಉದ್ದೇಶದಿಂದ ಆಲಿಗಢ ಮುಸ್ಲಿಂ ವಿವಿಯ ಅರೆಕಾಲಿಕ ಉದ್ಯೋಗಿ ಇರ್ಷಾದ್ ಎಂಬಾತನನ್ನು ಸಂಪರ್ಕಿಸಿ ಪ್ರಶ್ನೆ ಪತ್ರಿಕೆಯ ಪ್ರತಿ ಒದಗಿಸುವಂತೆ ಕೇಳಿದ್ದ. ಹೀಗೆ ಮಾಡಿದರೆ ಹುದ್ದೆಯನ್ನು ಖಾಯಂಗೊಳಿಸುವ ಭರವಸೆ ನೀಡಿದ್ದ ಎಂದು ವರದಿಯಾಗಿದೆ.

ಆದರೆ ಪ್ರಶ್ನೆ ಪತ್ರಿಕೆ ದೊರಕದ ಕಾರಣ ಇರ್ಷಾದ್ ಮತ್ತು ಆತನ ಸ್ನೇಹಿತ ಹೈದರ್ ಎಂಬವರು ನಕಲಿ ಪ್ರಶ್ನೆ ಪತ್ರಿಕೆ ತಯಾರಿಸಿ ಅದನ್ನು ತನ್ನ ಗೆಳತಿಗೆ ನೀಡುವಂತೆ ಆಲಂಗೆ ಸೂಚಿಸಿದ್ದರು. ಅದರಂತೆ ಆಲಂ ನಕಲಿ ಪ್ರಶ್ನೆಪತ್ರಿಕೆ ಮತ್ತು ಆ ಪ್ರಶ್ನೆಗಳ ಉತ್ತರವನ್ನು ಗೆಳತಿಗೆ ನೀಡಿದ್ದ. ಆದರೆ ಅದು ನಕಲಿ ಎಂದು ತಿಳಿದಾಗ ಕೋಪಗೊಂಡ ಆಕೆ ಆಲಂನೊಂದಿಗೆ ಮಾತು ಬಿಟ್ಟಿದ್ದಳು ಎನ್ನಲಾಗಿದೆ.

ಈ ಮಧ್ಯೆ ಆಲಂ, ಹೈದರ್ ಹಾಗೂ ಇರ್ಷಾದ್ ನಕಲಿ ಪ್ರಶ್ನೆ ಪತ್ರಿಕೆಯ ಪ್ರತಿಯನ್ನು 2 ಸಾವಿರ ರೂ. ಪಡೆದು ಹಲವರಿಗೆ ಮಾರಾಟ ಮಾಡಿದ್ದು, ಪ್ರವೇಶ ಪರೀಕ್ಷೆಗೆ ನೆರವಾಗಲು ವಾಟ್ಸಾಪ್ ತಂಡವನ್ನೂ ರಚಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆಲಂ, ಹೈದರ್ ಹಾಗೂ ಇರ್ಷಾದ್‌ರನ್ನು ಬಂಧಿಸಿದ್ದಾರೆ. ಆಲಂನ ಸ್ನೇಹಿತೆ ತಲೆ ಮರೆಸಿಕೊಂಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News