ದಲಿತ ವ್ಯಕ್ತಿಯ ವಿವಾಹ ದಿಬ್ಬಣಕ್ಕೆ ಕಲ್ಲೆಸೆತ ಪ್ರಕರಣ: ಗಾಯಗೊಂಡಿದ್ದ ಕುದುರೆ ಸಾವು

Update: 2019-05-28 17:53 GMT

ಗಾಂಧೀನಗರ, ಮೇ 28: ದಲಿತ ಸಮುದಾಯದ ವರ ಕುದುರೆ ಮೇಲೇರಿ ದಿಬ್ಬಣ ಹೋಗುವುದನ್ನು ಆಕ್ಷೇಪಿಸಿ ವಿವಾಹ ಮೆರವಣಿಗೆಯ ಮೇಲೆ ಕಲ್ಲೆಸೆದ ಘಟನೆಯಲ್ಲಿ ಗಾಯಗೊಂಡಿದ್ದ ಕುದುರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ ಎಂದು ವರದಿಯಾಗಿದೆ.

   ಮೇ 12ರಂದು ಗುಜರಾತ್‌ನ ಖಂಬೀಸಾರ್ ಗ್ರಾಮದಲ್ಲಿ ಘಟನೆ ನಡೆದಿದೆ. ಮೊದಾಸ ತಾಲೂಕಿನ ದಲಿತ ಯುವಕನ ವಿವಾಹ ದಿಬ್ಬಣದಲ್ಲಿ ವರ ಕುದುರೆ ಮೇಲೇರಿ ಸಾಗುತ್ತಿರುವುದಕ್ಕೆ ಆಕ್ಷೇಪ ಸೂಚಿಸಿದ ಪಾಟಿದಾರ್ ಸಮುದಾಯದ ಸುಮಾರು 150 ಜನರಿದ್ದ ತಂಡ (ಇವರಲ್ಲಿ 16 ಮಹಿಳೆಯರು) ತಡೆದಿದೆ. ಬಳಿಕ ತಂಡವು ವಿವಾಹ ದಿಬ್ಬಣದ ಮೇಲೆ ಕಲ್ಲೆಸೆದಿದೆ. ಈ ಘಟನೆಯಲ್ಲಿ ಕುದುರೆಗೆ ಗಂಭೀರ ಗಾಯವಾಗಿದೆ. ಪಟಿದಾರ್ ಸಮುದಾಯದ 27 ಪುರುಷರು ಹಾಗೂ 16 ಮಹಿಳೆಯರು ದುಷ್ಕೃತ್ಯ ನಡೆಸಿದವರು ಎಂದು ಮದುಮಗನ ತಂದೆ ದಯಾಭಾಯ್ ರಾಥೋಡ್ ಮೇ 17ರಂದು ದೂರು ದಾಖಲಿಸಿದ್ದರು. ಅದರಂತೆ 43 ವ್ಯಕ್ತಿಗಳ ವಿರುದ್ಧ ಐಪಿಸಿಯ ಹಲವು ಸೆಕ್ಷನ್‌ಗಳಡಿ ದೂರು ದಾಖಲಾಗಿತ್ತು. ಗಾಯಗೊಂಡಿದ್ದ ಕುದುರೆ ಸಾವನ್ನಪ್ಪಿದ್ದು ಇದೀಗ ಪೊಲೀಸರು ಆರೋಪಿಗಳ ವಿರುದ್ಧ ಮತ್ತೊಂದು ಪ್ರಕರಣ(ಜಾನುವಾರನ್ನು ಹತ್ಯೆ ಮಾಡಿರುವುದು) ದಾಖಲಿಸಿಕೊಂಡಿದ್ದಾರೆ.

ಈ ಮಧ್ಯೆ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಮೇ 27ರಂದು ಅರ್ಜಿಯ ವಿಚಾರಣೆ ನಡೆಸಿದಾಗ ಕುದುರೆಯ ಸಾವಿನ ವಿಷಯವನ್ನು ಉಲ್ಲೇಖಿಸಿ, ಜಾಮೀನು ನೀಡಲು ವಿರೋಧಿಸಿದ್ದೇವೆ ಎಂದು ರಾಥೋಡ್ ಪರ ವಕೀಲರು ಹೇಳಿದ್ದಾರೆ. ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಆದರೆ ಇನ್ನೂ ಆರೋಪಿಗಳ ಬಂಧನವಾಗಿಲ್ಲ ಎಂದು ರಾಥೋಡ್ ಅಸಮಾಧಾನ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News