ಭಾರತವನ್ನು ಟೀಕಿಸಿದ ಆರೋಪದಲ್ಲಿ ಜಾತಿ ವಿರೋಧಿ ಕಾರ್ಯಕರ್ತೆ ಸೇವೆಯಿಂದ ವಜಾ

Update: 2019-05-28 17:56 GMT

ಚೆನ್ನೈ, ಮೇ 27: ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಭಾರತವನ್ನು ಟೀಕಿಸಿದ್ದಾರೆ ಎನ್ನಲಾದ ಜಾತಿ ವಿರೋಧಿ ಹೋರಾಟಗಾರ್ತಿ ಕೌಸಲ್ಯಾ ಅವರನ್ನು ತಮಿಳುನಾಡು ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ಕಂಟೋನ್ಮೆಂಟ್ ಬೋರ್ಡ್ ಉದ್ಯೋಗದಿಂದ ಅಮಾನತುಗೊಳಿಸಿದೆ.

ಕೌಸಲ್ಯಾ ಅವರು ವೆಲ್ಲಿಂಗ್ಟನ್ ಕಂಟೋನ್ಮೆಂಟ್ ಮಂಡಳಿಯಲ್ಲಿ ಗುಮಾಸ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೌಸಲ್ಯಾ ಅವರು ರಾಜ್ಯದ ಸಾಮಾಜಿಕ ಹಾಗೂ ರಾಜಕೀಯ ಪ್ರಭಾವಿ ಹಿಂದುಳಿದ ವರ್ಗದವರು. ದಲಿತರಾಗಿರುವ ಅವರ ಪತಿ ಶಂಕರ್ ಉದುಮಲ್‌ಪೇಟ್‌ನ ಕುಮಾರಲಿಂಗಂ ಗ್ರಾಮದವರು. ಕೌಸಲ್ಯಾ ಪೋಷಕರು ಬಾಡಿಗೆ ಗೂಂಡಾಗಳ ಮೂಲಕ ಶಂಕರ್ ಅವರನ್ನು ಹತ್ಯೆಗೈದಿರುವುದು ಉದಮಲ್‌ಪೇಟ್ ಬಸ್‌ಸ್ಟಾಂಡ್ ಸಮೀಪದ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಹತ್ಯೆ ಹಿನ್ನೆಲೆಯಲ್ಲಿ ಕೌಸಲ್ಯಾ ಅವರು ತನ್ನ ಪೋಷಕರ ವಿರುದ್ಧ ಹೋರಾಟ ನಡೆಸಿದ್ದರು.

ಸಂವಿಧಾನದ ಪ್ರಕಾರ ಭಾರತವನ್ನು ಒಕ್ಕೂಟ ಎಂದು ಪರಿಗಣಿಸಲಾಗುತ್ತದೆ. ದೇಶ ಎಂದು ಅಲ್ಲ. ಈ ದೃಷ್ಟಿಕೋನದಲ್ಲಿ ಭಾರತವನ್ನು ದೇಶ ಎಂದು ಕರೆಯುವುದು ಹೇಗೆ ? ಅದೇ ರೀತಿ ತಮಿಳುನಾಡನ್ನು ನಾನು ರಾಜ್ಯ ಎಂದು ಸ್ವೀಕರಿಸಲು ನನಗೆ ಸಾಧ್ಯವಿಲ್ಲ. ಅಲ್ಲದೆ, ತಮಿಳುನಾಡನ್ನು ಎಲ್ಲಾ ರೀತಿಯಿಂದಲೂ ನಿರ್ಲಕ್ಷಿಸಲಾಗಿದೆ ಎಂದು ಕೌಸಲ್ಯಾ ಪತ್ರಿಕೆಯೊಂದಕ್ಕೆ ಇತ್ತೀಚೆಗೆ ನೀಡಿದ್ದ ಸಂದರ್ಶದಲ್ಲಿ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಟೋನ್ಮೆಂಟ್ ಬೋರ್ಡ್‌ನ ಅಧಿಕಾರಿ, ಬೋರ್ಡ್‌ನ ಅಧಿಕಾರಿಗಳ ಮುಂದಿನ ಸಭೆಯಲ್ಲಿ ಕೌಸಲ್ಯಾ ಅವರ ಅಮಾನತಿನ ಬಗ್ಗೆ ಚರ್ಚಿಸಲಾಗುವುದು. ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಶಿಫಾರಸು ಮಾಡಲು ನಾವು ಯೋಜಿಸಿದ್ದೇವೆ ಎಂದಿದ್ದಾರೆ. 2016 ಮಾರ್ಚ್‌ನಲ್ಲಿ ಜಾತಿ ಕಾರಣಕ್ಕೆ ಕೌಸಲ್ಯಾ ಅವರ ಪತಿಯನ್ನು ಆಕೆಯ ತಂದೆ ಸಂಚು ರೂಪಿಸಿ ಹತ್ಯೆ ನಡೆಸಿದ್ದರು. ಈ ಘಟನೆ ಬಳಿಕ ಕೌಸಲ್ಯಾ, ಜಾತಿ ವಿರೋಧಿ ಹೋರಾಟಗಾರ್ತಿಯಾದರು. ರಾಜ್ಯದಲ್ಲಿ ವಿವಿಧ ವಿಷಯಗಳ ವಿರುದ್ಧ ತನ್ನ ಧ್ವನಿ ಎತ್ತಿದ್ದರು ಹಾಗೂ ಪ್ರತಿಭಟನೆ ನಡೆಸಿದ್ದರು. ಅಂತರ್‌ಜಾತಿ ದಂಪತಿಯನ್ನು ರಕ್ಷಿಸಲು ಕಾನೂನು ತರುವಂತೆ ಅವರು ಅಭಿಯಾನ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News