ಎನ್‌ಆರ್‌ಸಿ ಆಕ್ಷೇಪದ ವಿಚಾರಣೆ: ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ವೃದ್ಧ ವ್ಯಕ್ತಿಯ ಮೃತದೇಹ ಪತ್ತೆ

Update: 2019-05-28 17:58 GMT

ದಿಸ್ಪುರ್, ಮೇ 28: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ಅಂತಿಮ ಕರಡಿನಲ್ಲಿ ಹೆಸರು ಸೇರಿಸಿರುವುದರ ವಿರುದ್ಧದ ಆಕ್ಷೇಪಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾದ ಸುಮಾರು 90 ವರ್ಷದ ವ್ಯಕ್ತಿಯೋಬ್ಬರ ಮೃತದೇಹ ಅಸ್ಸಾಂನ ಕಾಮ್‌ರೂಪ್ ಜಿಲ್ಲೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮತದಾರರ ಗುರುತು ಪತ್ರದ ಪ್ರಕಾರ ಈ ವ್ಯಕ್ತಿಯನ್ನು ಅಶ್ರಫ್ ಅಲಿ ಎಂದು ಗುರುತಿಸಲಾಗಿದೆ. ಗುರುತು ಪತ್ರದಲ್ಲಿ ದಾಖಲಾಗಿರುವಂತೆ 2013ರಲ್ಲಿ ಇವರ ವಯಸ್ಸು 88 ಆಗಿತ್ತು. ಅಶ್ರಫ್ ಅಲಿ ಅವರು ರವಿವಾರ ಸಂಜೆ ನಾಪತ್ತೆಯಾಗಿದ್ದರು. ಮರು ದಿನ ಬೆಳಗ್ಗೆ ಬೋಕೋನ ಸಂಟೋಲಿಯಲ್ಲಿರುವ ಶಾಲೆಯ ಸಮೀಪ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರಲ್ಲಿ ಮತದಾರರ ಗುರುತು ಪತ್ರ ಇತ್ತು ಹಾಗೂ 1971ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇತ್ತು.

ಎನ್‌ಆರ್‌ಸಿ ವಿಚಾರಣೆಯ ಬಳಿಕ ಭೀತರಾದ ಅಲಿ ವಿಷ ಸೇವಿಸಿದ್ದಾರೆ ಎಂದು ಅವರ ಕುಟುಂಬದವರು ಹೇಳಿದ್ದಾರೆ. ಆದರೆ, ಅವರ ಮೃತದೇಹದ ಪಕ್ಕದಲ್ಲಿ ಯಾವುದೇ ವಿಷದ ಬಾಟಲಿ ಇರಲಿಲ್ಲ. ಇದು ಆತ್ಮಹತ್ಯೆಯಂತೆ ಕಾಣುತ್ತಿಲ್ಲ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿಗಾಗಿ ಕಾಯಲಾಗುತ್ತಿದೆ ಎಂದು ಕಾಮ್‌ರೂಪ್‌ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂಜೀಬ್ ಸೈಕಿಯಾ ತಿಳಿಸಿದ್ದಾರೆ.

ಕಳೆದ ವರ್ಷ ಪ್ರಕಟಿಸಲಾದ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಕರಡು ಪಟ್ಟಿಯಲ್ಲಿ ಅವರ ಹೆಸರು ಇತ್ತು. ಆದರೆ, ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ರಂಜಿಯಾದಲ್ಲಿ ನಡೆದ ವಿಚಾರಣೆಯಲ್ಲಿ ಅಶ್ರಫ್ ಪಾಲ್ಗೊಂಡಿದ್ದರು. ವಿಚಾರಣೆಯ ನಂತರ ಅವರ ಬಯೋಮೆಟ್ರಿಕ್ ಅನ್ನು ಹಿಂದೆ ಪಡೆಯಲಾಗಿತ್ತು. ‘‘ವಿದೇಶಿಗರ ಬಯೋಮೆಟ್ರಿಕ್ ವಿವರವನ್ನು ಪಡೆಯಲಾಗುತ್ತಿದೆ. ಅಂತವರನ್ನು ಪೊಲೀಸರು ಬಂಧನ ಶಿಬಿರದಲ್ಲಿ ಇರಿಸುತ್ತಿದ್ದಾರೆ’’ ಎಂದು ಕೆಲವರು ಅಶ್ರಫ್ ಅಲಿ ಅವರಲ್ಲಿ ಹೇಳಿದ್ದರು. ಇದರಿಂದ ಭೀತಿಗೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಲಿ ಅವರ ಸಂಬಂಧಿ ಫಝ್ಲರ್ರಹ್ಮಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News