ಮೋದಿ ಭಾರತವನ್ನು ಒಗ್ಗೂಡಿಸಿದ್ದಾರೆ ಎಂದ ‘ಟೈಮ್ ಮ್ಯಾಗಝಿನ್’ ಲೇಖನ

Update: 2019-05-29 07:23 GMT

ಹೊಸದಿಲ್ಲಿ, ಮೇ 29: ಚುನಾವಣೆಗಿಂತ ಕೆಲವೇ ದಿನಗಳ ಮೊದಲು ‘ನರೇಂದ್ರ ಮೋದಿ-ಇಂಡಿಯಾಸ್ ಡಿವೈಡರ್ ಇನ್ ಚೀಫ್’ ಎಂಬ ಮುಖಪುಟ ಲೇಖನ ಪ್ರಕಟಿಸಿ ಸುದ್ದಿಗೆ ಗ್ರಾಸವಾಗಿದ್ದ ಅಮೆರಿಕಾದ ಪ್ರತಿಷ್ಠಿತ ಟೈಮ್ ಮ್ಯಾಗಝಿನ್, ಇದೀಗ ಚುನಾವಣೆ ಮುಗಿದು ಮೋದಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿದ್ದಂತೆಯೇ ತನ್ನ ನಿಲುವು ಬದಲಿಸಿದೆಯೋ ಎಂಬಂತೆ ಮೋದಿ ದೇಶವನ್ನು ಒಗ್ಗೂಡಿಸಿದ್ದಾರೆ (ಯುನಿಫೈಯರ್) ಎಂದು ಬಣ್ಣಿಸುವ ಲೇಖನ ಪ್ರಕಟಿಸಿದೆ.

“ಮೋದಿ ಹ್ಯಾಸ್ ಯುನೈಟೆಡ್ ಇಂಡಿಯಾ ಲೈಕ್ ನೋ ಪ್ರೈಮ್ ಮಿನಿಸ್ಟರ್ ಇನ್ ಡಿಕೇಡ್ಸ್'' (ಕಳೆದ ಹಲವು ದಶಕಗಳಲ್ಲಿ ಯಾವುದೇ ಪ್ರಧಾನಿ ಮಾಡದ ರೀತಿಯಲ್ಲಿ ಮೋದಿ ಭಾರತವನ್ನು ಒಗ್ಗೂಡಿಸಿದ್ದಾರೆ) ಎಂಬ ಶೀರ್ಷಿಕೆಯ ಲೇಖನವನ್ನು ‘ಟೈಮ್’ಗಾಗಿ ಮನೋಜ್ ಲಾಡ್ವ ಬರೆದಿದ್ದು, ಈ ಲೇಖನ ಟೈಮ್ ವೆಬ್ ಸೈಟ್ ನಲ್ಲಿ ಮಂಗಳವಾರ ಪ್ರಕಟಗೊಂಡಿದೆ. ಅಂದ ಹಾಗೆ ಈ ಲೇಖನ ಬರೆದಿರುವ ಮನೋಜ್ ಅವರು 2014ರಲ್ಲಿ ‘ನರೇಂದ್ರ ಮೋದಿ ಫಾರ್ ಪಿಎಂ’ ಅಭಿಯಾನದ ಸಂಘಟಕರಾಗಿದ್ದರೆಂಬುದು ಇಲ್ಲಿ ಉಲ್ಲೇಖಾರ್ಹ.

ಜನರನ್ನು ವಿಭಜಿಸುವವರೆಂದು ತಿಳಿಯಲಾದವರು ಅಧಿಕಾರ ಉಳಿಸಿಕೊಳ್ಳಲು ಹಾಗೂ ತಮಗಿದ್ದ ಬೆಂಬಲ ಹೆಚ್ಚಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಯ ಜತೆಗೆ ಲೇಖನದಲ್ಲಿ ಅದಕ್ಕೆ ಉತ್ತರವನ್ನೂ ನೀಡಲಾಗಿದ್ದು ‘ಭಾರತದ ಅತ್ಯಂತ ದೊಡ್ಡ  ದೋಷವಾದ - ವರ್ಗಗಳ ನಡುವಿನ  ಕಂದಕವನ್ನು ಮೀರಿ ನಿಲ್ಲುವಲ್ಲಿ ಅವರು ಸಫಲರಾಗಿದ್ದಾರೆ’ ಎಂದು ವರ್ಣಿಸಲಾಗಿದೆ.

ನರೇಂದ್ರ ಮೋದಿ ಹಿಂದುಳಿದ ವರ್ಗಕ್ಕೆ ಸೇರಿದವರೆಂಬುದನ್ನು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಭಾರತದ ಅತ್ಯಂತ ದುರ್ಬಲ ವರ್ಗಗಳಲ್ಲಿ ನರೇಂದ್ರ ಮೋದಿ ಜನಿಸಿದ್ದರು. ಈ ಉನ್ನತ ಹುದ್ದೆಗೇರುವಲ್ಲಿ ಅವರು ದುಡಿಯುವ ವರ್ಗಗಳ ನಿರೀಕ್ಷೆಗಳ ದ್ಯೋತಕವಾಗಿದ್ದಾರೆ ಹಾಗೂ ಈ ದೇಶವನ್ನು 72 ವರ್ಷಗಳ ಕಾಲ ಆಳಿದ ನೆಹರೂ-ಗಾಂಧಿ ವಂಶಕ್ಕೆ ಸಾಧ್ಯವಾಗದ ರೀತಿಯಲ್ಲಿ ಬಡ ನಾಗರಿಕರೊಂದಿಗೆ ಮೋದಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.

“ಮೋದಿಯವರ ಮೊದಲ ಆಡಳಿತಾವಧಿಯಲ್ಲಿ ಹಾಗೂ ಚುನಾವಣೆ ಸಂದರ್ಭ ಅವರ ವಿರುದ್ಧ ಅನ್ಯಾಯವಾಗಿ ಹೊರಿಸಲಾದ ಟೀಕೆಗಳ ಹೊರತಾಗಿಯೂ ಯಾವುದೇ ಪ್ರಧಾನಿ ದೇಶದ ಮತದಾರರನ್ನು ಇಷ್ಟೊಂದು ಒಗ್ಗೂಡಿಸಿರಲಿಲ್ಲ'' ಎಂದು ಮನೋಜ್ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News