ಬಾರಾಬಂಕಿ ವಿಷ ಮದ್ಯ ಪ್ರಕರಣ: ಎನ್‌ಕೌಂಟರ್‌ನಲ್ಲಿ ಇನ್ನೋರ್ವ ಆರೋಪಿಯ ಬಂಧನ

Update: 2019-05-29 17:16 GMT

ಲಕ್ನೋ, ಮೇ 29: ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಕನಿಷ್ಠ 16 ಜನರ ಸಾವಿಗೆ ಕಾರಣವಾದ ವಿಷ ಮದ್ಯ ಪೂರೈಕೆ ಮಾಡಿದ್ದ ಸಾರಾಯಿ ಅಂಗಡಿಯ ಮಾರಾಟಗಾರನನ್ನು ಪೊಲೀಸರು ಬುಧವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಬಂಧಿಸಿದ್ದಾರೆ.

ಬಾರಾಬಂಕಿಯ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಣಿಗಂಜ್‌ನಿಂದ 2 ಕಿ.ಮೀ. ದೂರದಲ್ಲಿ ಪೊಲೀಸರ ತಂಡ ಶೋಧ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಸಾರಾಯಿ ಮಾರಾಟಗಾರ ಪಪ್ಪು ಜೈಸ್ವಾಲ್ ಗುಂಡಿನ ದಾಳಿ ನಡೆಸಿದ್ದ. ಪೊಲೀಸರು ಪ್ರತಿ ದಾಳಿ ನಡೆಸಿ ಪಪ್ಪು ಜೈಸ್ವಾಲ್‌ನನ್ನು ಬಂಧಿಸಿದರು.

ಈ ಗುಂಡಿನ ಚಕಮಕಿಯಲ್ಲಿ ಪಪ್ಪು ಜೈಸ್ವಾಲ್‌ನ ಬಲಗಾಲಿಗೆ ಗುಂಡು ತಾಗಿ ಗಾಯವಾಗಿದೆ ಎಂದು ಬಾರಾಬಂಕಿ ಪೊಲೀಸ್ ಅಧೀಕ್ಷಕ ಅಜಯ್ ಸಹಾನಿ ಹೇಳಿದ್ದಾರೆ. ವಿಷ ಮದ್ಯ ಪ್ರಕರಣದಲ್ಲಿ ಮತ್ತೆರಡು ಮಂದಿ ಸಾವನ್ನಪ್ಪಿರು ವುದನ್ನು ಜಿಲ್ಲಾಡಳಿತ ದೃಢಪಡಿಸುವುದರೊಂದಿಗೆ ಸಾವನ್ನಪ್ಪಿದ ವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಆದರೆ, 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಜಿಲ್ಲಾಡಳಿತ ನೀಡಿರುವ ಸಾವಿನ ಸಂಖ್ಯೆ ಹಾಗೂ ಸ್ಥಳೀಯರು ನೀಡಿರುವ ಸಾವಿನ ಸಂಖ್ಯೆ ನಡುವೆ ಹೊಂದಿಕೆ ಆಗದೇ ಇರುವುದರಿಂದ ಸಂತ್ರಸ್ತರ ಸಂಖ್ಯೆ ಬಗ್ಗೆ ಗೊಂದಲ ಉಂಟಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗುತ್ತಿರುವ ನಾಲ್ಕನೇ ವ್ಯಕ್ತಿ ಪಪ್ಪು ಜೈಸ್ವಾಲ್. ಮಂಗಳವಾರ ಸುನೀಲ್ ಕುಮಾರ್ ಜೈಸ್ವಾಲ್, ಇನ್ನೋರ್ವ ಮಾರಾಟಗಾರ, ಪೀತಾಂಬರ್ ಹಾಗೂ ಚೋಟುವನ್ನು ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News