ಇವಿಎಂ ವಿರುದ್ಧ ನಾಳೆ ದೇಶಾದ್ಯಂತ ಪ್ರತಿಭಟನೆ: ‘ಇವಿಎಂ ಹಠಾವೋ ದೇಶ್ ಬಚಾವೋ ’ಆಂದೋಲನ ಕರೆ

Update: 2019-05-29 18:15 GMT

ಹೊಸದಿಲ್ಲಿ,ಮೇ 29: ಈ ಸಲದ ಲೋಕಸಭಾ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿಯು ಬೃಹತ್‌ ಪ್ರಮಾಣದಲ್ಲಿ ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ಗಳಲ್ಲಿ ವಂಚನೆ ನಡೆಸಿದೆಯೆಂದು ‘ಇವಿಎಂ ಹಠಾವೋ ದೇಶ್ ಬಚಾವೋ’ ಆಂದೋಲನ ಆರೋಪಿಸಿದೆ. ಇವಿಎಂ ಅಕ್ರಮವನ್ನು ಪ್ರತಿಭಟಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಪ್ರಮಾಣವಚನ ಸ್ವೀಕರಿಸುವ ದಿನವಾದ ಮೇ 30ರಂದು ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಅದು ಕರೆ ನೀಡಿದೆ.

 ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ದತ್ತಾಂಶಗಳು, ಮಹಾರಾಷ್ಟ್ರದ 48 ಕ್ಷೇತ್ರಗಳಲ್ಲಿ ಏಣಿಕೆಯಾದ ಮತಗಳ ಸಂಖ್ಯೆಗೂ, ಚಲಾವಣೆಯಾದ ಮತಗಳ ಸಂಖ್ಯೆಗೂ ಹೋಲಿಕೆಯಾಗದೆ ಇರುವುದನ್ನು ತೋರಿಸಿಕೊಟ್ಟಿವೆ. ಮಧ್ಯಪ್ರದೇಶದ 203 ವಿಧಾನಸಭಾ ಕ್ಷೇತ್ರಗಳಲ್ಲಿ ಅವು ಹೊಂದಿಕೆಯಾಗಿಲ್ಲ. ಇವಿಎಂಗಳನ್ನು ದುರ್ಬಳಕೆ ಮಾಡಲಾಗಿದೆಯೆಂಬುದನ್ನು ಇದು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಹೀಗಾಗಿ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ನಂಬಲು ಸಾಧ್ಯವಿಲ್ಲವೆಂದು ಅಭಿಯಾನದ ಸಂಘಟಕರು ಹೇಳಿದ್ದಾರೆ.

  ದೇಶಾದ್ಯಂತ ಹಲವಾರು ಮಂದಿ ತಮ್ಮ ಕ್ಷೇತ್ರಗಳಲ್ಲಿ ಮತದಾನದಲ್ಲಿ ಲೋಪ ದೋಷಗಳು ಉಂಟಾಗಿರುವ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಹಲವೆಡೆ ಇವಿಎಂಗಳ ಕಾರ್ಯನಿರ್ವಹಣೆಯಲ್ಲಿ ದೋಷಗಳು ಕಂಡುಬಂದಿವೆ ಹಾಗೂ ಸಾವಿರಾರು ಇವಿಎಂಗಳನ್ನು ಅನುಮಾನಾಸ್ಪದವಾದ ರೀತಿಯಲ್ಲಿ ಮತಏಣಿಕೆ ಕೇಂದ್ರಗಳಿಗೆ ಸಾಗಾಟ ಮಾಡಲಾಗಿತ್ತು ಹಾಗೂ ಅವುಗಳಲ್ಲಿ ಕೆಲವು ಹೊಟೇಲ್ ಕೊಠಡಿಗಳಲ್ಲಿಯೂ ಪತ್ತೆಯಾಗಿದ್ದವು ಎಂದು ಅವರು ಹೇಳಿದ್ದಾರೆ.

  ಎರಡು ತಿಂಗಳುಗಳ ಸುದೀರ್ಘ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಚುನಾವಣಾ ಆಯೋಗವು ಪಕ್ಷಪಾತದಿಂದ ಕೂಡಿದ ನಿಲುವನ್ನು ತಳೆದಿತ್ತು ಹಾಗೂ ದೇಶದ ಇತರ ಸಾಂವಿಧಾನಿಕ ಸಂಸ್ಥೆಗಳಂತೆ, ಚುನಾವಣಾ ಆಯೋಗವನ್ನು ಕೂಡಾ ನರೇಂದ್ರ ಮೋದಿ ಬುಡಮೇಲುಗೊಳಿಸಿದ್ದಾರೆ.

ಬಿಜೆಪಿಯು ಬೃಹತ್ ಪ್ರಮಾಣದಲ್ಲಿ ನಡೆಸುತ್ತಿರುವ ಇವಿಎಂ ವಂಚನೆಯನ್ನು ವಿರೋಧಿಸಿ ಜನರ ಬಳಿ ತಾವು ಹೋಗಲಿದ್ದು, ಆ ಬಗ್ಗೆ ಮೇ 30ರಂದು ಪ್ರತಿಭಟನೆ ನಡೆಸಲಾಗುವುದೆಂದು ಅಭಿಯಾನ ಹೇಳಿದೆ.

   ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಇವಿಎಂಗಳ ಬಳಕೆಯನ್ನು ಕೊನೆಗೊಳಿಸಬೇಕು ಹಾಗೂ ಮತಪತ್ರಗಳ ವ್ಯವಸ್ಛೆಗೆ ಮರಳಬೇಕೆಂದು ಆಗ್ರಹಿಸುವ ಈ ಚಳವಳಿಯಲ್ಲಿ ಜನತೆ ಕೈಜೋಡಿಸುವರು ಎಂಬ ಆತ್ಮವಿಶ್ವಾಸವನ್ನು ಅಭಿಯಾನವು ವ್ಯಕ್ತಪಡಿಸಿದೆ.

 ಜನತೆಯು ಬಹಿರಂಗವಾಗಿ ಇವಿಎಂಗಳ ವಿರುದ್ಧ ತಮ್ಮ ಅವಿಶ್ವಾಸ, ಆಕ್ರೋಶ, ವಿರೋಧ ಹಾಗೂ ಅಪನಂಬಿಕೆಯನ್ನು ವ್ಯಕ್ತಪಡಿಸಬೇಕಾಗಿದೆ. ಸುಪ್ರೀಂಕೋರ್ಟ್ ಈ ಚುನಾವಣಾ ಫಲಿತಾಂಶವನ್ನು ಬದಿಗಿಟ್ಟು, ಈ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಮತಪತ್ರಗಳ ಮೂಲಕ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಬೇಕಾಗಿದ್ದು, ಹಾಗಾದಲ್ಲಿ ಮಾತ್ರವೇ ಪ್ರಜಾಪ್ರಭುತ್ವದ ಬಗ್ಗೆ ಜನತೆಯ ವಿಶ್ವಾಸ ಮತ್ತೊಮ್ಮೆ ದೃಢಗೊಳ್ಳಲಿದೆಯೆದಂಬ ಇವಿಎಂ ಹಠಾವೋ ದೇಶ್ ಬಚಾವೋ ಅಭಿಯಾನ ಹೇಳಿದೆ.

ಮೇ 30ರಂದು ದೇಶಾದ್ಯಂತ ಎಲ್ಲಾ ನಾಗರಿಕರು, ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಪಕ್ಷಗಳು, ನಗರಗಳಲ್ಲಿ, ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸಬೇಕೆಂದು ‘ಇವಿಎಂ ಹಠಾವೋ ದೇಶ್ ಬಚಾವೋ’ ಅಭಿಯಾನದ ಸಂಘಟಕರು ಕರೆ ನೀಡಿದ್ದಾರೆ.

 ನಿವೃತ್ತ ನ್ಯಾಯಮೂರ್ತಿ ಕೋಲ್ಸೆ ಪಾಟೀಲ್, ಡಾ.ಉರೇಶ್ ಕೈರ್ನಾರ್, ನಿರಂಜನ್ ಟಟಕ್ಲೆ, ಶಬನಂ ಹಾಶ್ಮಿ, ರವಿ ಭಿಲಾನೆ, ನ್ಯಾಯವಾದಿ ನಿರಂಜನ್ ಶೆಟ್ಟಿ, ಪ್ರೊ. ಕುಂಡಾ ಪರಿಮಳ, ಆಮೀರ್ ಖಾಝಿ, ಕಾಶಿನಾಥ್ ನಿಕಾಲ್ಜೆ, ಸ್ವಾತಿ ಕುಂಚಿಕೊರೆ ಮತ್ತಿತರ ಗಣ್ಯರು ಇವಿಂ ಹಠಾವೋ ದೇಶ್ ಬಚಾವೋ ಆಂದೋಲನದ ಆಯೋಜಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News