×
Ad

ರಾಜೀನಾಮೆ ಹಿಂಪಡೆಯಲು ರಾಹುಲ್ ಒಪ್ಪುತ್ತಿಲ್ಲ: ತರುಣ್ ಗೊಗೋಯ್

Update: 2019-05-30 22:09 IST

ಗುವಾಹಟಿ, ಮೇ 30: ಪಕ್ಷಾಧ್ಯಕ್ಷ ರಾಜೀನಾಮೆ ನೀಡುವ ತಮ್ಮ ನಿರ್ಧಾರಕ್ಕೆ ರಾಹುಲ್ ಗಾಂಧಿ ಬಲವಾಗಿ ಅಂಟಿಕೊಂಡಿದ್ದಾರೆ ಎಂದು ಅಸ್ಸಾಂನ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ತರುಣ್ ಗೊಗೊಯ್ ಹೇಳಿದ್ದಾರೆ.

ಅಧ್ಯಕ್ಷರಾಗಿ ರಾಹುಲ್ ಮುಂದುವರಿಯಬೇಕೆಂಬುದು ನಮ್ಮ ಇಚ್ಛೆಯಾಗಿದೆ. ಆದರೆ ಅದಕ್ಕೆ ಅವರು ಒಪ್ಪುತ್ತಿಲ್ಲ. ನಿಮ್ಮ ರಾಜೀನಾಮೆ ಸ್ವೀಕರಿಸುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರೂ ಸರ್ವಾನುಮತದಿಂದ ಹೇಳಿ ರಾಜೀನಾಮೆ ಹಿಂಪಡೆಯುವಂತೆ ರಾಹುಲ್‌ರನ್ನು ಕೇಳಿಕೊಂಡಿದ್ದೇವೆ ಎಂದು ಗೊಗೋಯ್ ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಬಲಿಷ್ಟ ವಿಪಕ್ಷದ ಅಗತ್ಯವಿದೆ. ಕಾಂಗ್ರೆಸ್ ಮಾತ್ರ ಬಲಿಷ್ಟ ವಿಪಕ್ಷವಾಗಬಹುದು. ರಾಹುಲ್ ದೇಶದಾದ್ಯಂತ ವರ್ಚಸ್ಸು ಹೊಂದಿರುವ ನಾಯಕನಾಗಿದ್ದು ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಪಕ್ಷ ಮುನ್ನಡೆಸಲು ರಾಹುಲ್ ಸಮರ್ಥ ನಾಯಕ ಎಂದವರು ಹೇಳಿದ್ದಾರೆ. ಮುಂದಿನ ಅಧ್ಯಕ್ಷನನ್ನು ಆಯ್ಕೆ ಮಾಡುವವರೆಗೆ ಹುದ್ದೆಯಲ್ಲಿ ಮುಂದುವರಿಯುತ್ತೇನೆ. ನೂತನ ಅಧ್ಯಕ್ಷರಿಗೆ ಎಲ್ಲಾ ನೆರವನ್ನೂ ನೀಡುತ್ತೇನೆ ಮತ್ತು ಬಿಜೆಪಿ ಹಾಗೂ ಪ್ರಧಾನಿ ಮೋದಿಯೊಂದಿಗಿನ ಸೈದ್ಧಾಂತಿಕ ಹೋರಾಟ ಮುಂದುವರಿಸುವುದಾಗಿ ರಾಹುಲ್ ಹೇಳಿದ್ದಾರೆ ಎಂದು ಗೊಗೊಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News