ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ, ಕಾರ್ತಿಗೆ ಬಂಧನದಿಂದ ರಕ್ಷಣೆ ವಿಸ್ತರಣೆ
Update: 2019-05-30 22:15 IST
ಹೊಸದಿಲ್ಲಿ, ಮೇ 30: ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿಗೆ ನೀಡಲಾಗಿದ್ದ ಬಂಧನದಿಂದ ರಕ್ಷಣೆಯನ್ನು ದಿಲ್ಲಿಯ ನ್ಯಾಯಾಲಯ ಆಗಸ್ಟ್ 1ರವರೆಗೆ ವಿಸ್ತರಿಸಿದೆ.
ಇವರಿಬ್ಬರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಕ್ರಿಯಿಸಲು ಮೂರು ವಾರಗಳ ಸಮಯಾವಕಾಶವನ್ನು ಜಾರಿ ನಿರ್ದೇಶನಾಲಯ ಕೋರಿದ್ದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶ ಒಪಿ ಸೈನಿ ಬಂಧನದಿಂದ ರಕ್ಷಣೆ ಅವಧಿಯನ್ನು ವಿಸ್ತರಿಸುವಂತೆ ಆದೇಶಿಸಿದರು.
ಚಿದಂಬರಂ ಹಾಗೂ ಅವರ ಪುತ್ರನ ಬ್ಯಾಂಕ್ ಖಾತೆಯ ವಿವರ ತಮ್ಮ ಬಳಿಯಿದ್ದು ಅದನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ ವಿಶೇಷ ನಿರ್ದೇಶಕರು ಸಿಂಗಾಪುರಕ್ಕೆ ತೆರಳಿರುವ ಕಾರಣ, ಮುಂದಿನ ಬೆಳವಣಿಗೆಯನ್ನು ಗಮನಿಸಿ ಪ್ರತಿಕ್ರಿಯೆ ನೀಡುವುದಾಗಿ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು.