ಡಾ. ಪಾಯಲ್ ರನ್ನುಕೊಲೆಗೈಯಲಾಯಿತೇ?

Update: 2019-05-30 17:14 GMT

ಮುಂಬೈ, ಮೇ 30: ಇತ್ತೀಚೆಗೆ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಪಾಯಲ್ ತಡವಿ ಅವರ ಮರಣೋತ್ತರ ಪರೀಕ್ಷೆಯ ವರದಿ ಶವದ ಕುತ್ತಿಗೆಯ ಸುತ್ತ ಹಗ್ಗದ ಗಾಯದ ಗುರುತು ಇತ್ತು ಎಂದು ಹೇಳಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿಗೆ ಕಾರಣ ಎಂಬ ಕಲಂನಲ್ಲಿ ಕುತ್ತಿಗೆಯ ಸುತ್ತ ಹಗ್ಗದ ಗಾಯ ಇದೆ ಎಂದು ವರದಿ ಹೇಳಿದೆ.

ಈ ಪ್ರಕರಣವನ್ನು ಹತ್ಯೆ ಪ್ರಕರಣ ಎಂದು ಪರಿಗಣಿಸಲು ನಿರ್ದೇಶಿಸುವಂತೆ ಯುವತಿಯ ಕುಟುಂಬ ಮನವಿ ಮಾಡಿದ ಬಳಿಕ ಮುಂಬೈ ನ್ಯಾಯಾಲಯ ಬುಧವಾರ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಸಾವಿನ ಸಾಂದರ್ಭಿಕತೆ ಗಮನಿಸಿ ಈ ಪ್ರಕರಣವನ್ನು ಹತ್ಯೆ ಪ್ರಕರಣ ಎಂದು ಪರಿಗಣಿಸುವಂತೆ ಪಾಯಲ್ ತಡವಿ ಕುಟುಂಬದ ಪರವಾಗಿ ಹಾಜರಾದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆಕೆಯ ಸಾವಿನ ಸಾಂದರ್ಭಿಕತೆ ಹಾಗೂ ಆಕೆಯ ದೇಹದ ಜಜ್ಜಿದ ಗುರುತುಗಳಿಂದ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ನಾವು ಹೇಳಲು ಸಾಧ್ಯ. ಈ ಪ್ರಕರಣವನ್ನು ಕೊಲೆ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕು. ಅದಕ್ಕಾಗಿ ಪೊಲೀಸರಿಗೆ 14 ದಿನಗಳ ಕಾಲಾವಕಾಶ ನೀಡಬೇಕು ಎಂದು ವಕೀಲ ನಿತಿನ್ ಸತ್ಪುತೆ ತಿಳಿಸಿದ್ದಾರೆ.

ಆರೋಪಿ ಆಕೆಯ ಮೃತದೇಹವನ್ನು ಇತರ ಕೆಲವು ಸ್ಥಳಗಳಿಗೆ ಕೊಂಡೊಯ್ದಿದ್ದಾನೆ. ಅನಂತರ ಆಸ್ಪತ್ರೆಗೆ ತಂದಿದ್ದಾನೆ. ಆದುದರಿಂದ ಸಾಕ್ಷ ನಾಶಪಡಿಸಿದ ಸಂದೇಹ ಇದೆ ಎಂದು ಸತ್ಪುತೆ ನ್ಯಾಯಾಲಯದಲ್ಲಿ ಹೇಳಿದರು. ಮುಂಬೈ ಸೆಷನ್ಸ್ ನ್ಯಾಯಾಲಯದ ದಂಡಾಧಿಕಾರಿ ಆರ್.ಎಂ. ಸದ್ರಾನಿ ಮುಂದೆ ಈ ಪ್ರಕರಣದ ವಿಚಾರಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News