ಮಿತ್ರಕೂಟ ಏರ್ಪಡಿಸಲು ಪ್ರಧಾನಿ ನೆತನ್ಯಾಹು ವಿಫಲ: ಇಸ್ರೇಲ್ ನಲ್ಲಿ ಮರು ಚುನಾವಣೆ

Update: 2019-05-30 17:23 GMT

ಜೆರುಸಲೇಮ್, ಮೇ 30: ಇಸ್ರೇಲ್ ಸಂಸತ್ತಿಗೆ ಚುನಾವಣೆ ನಡೆದ ಕೆಲವೇ ತಿಂಗಳುಗಳಲ್ಲಿ ಹೊಸದಾಗಿ ಇನ್ನೊಂದು ಚುನಾವಣೆ ನಡೆಸುವ ಐತಿಹಾಸಿಕ ನಿರ್ಣಯವೊಂದನ್ನು ಇಸ್ರೇಲ್ ಸಂಸತ್ತು ಗುರುವಾರ ಅಂಗೀಕರಿಸಿದೆ.

ಇಸ್ರೇಲ್ ಸಂಸತ್ತಿನ 120 ಸ್ಥಾನಗಳಿಗೆ ಎಪ್ರಿಲ್ 9ರಂದು ಚುನಾವಣೆ ನಡೆದಿತ್ತು. ಆದರೆ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷ ಹಾಗೂ ಇತರ ಬಲಪಂಥೀಯ ಮತ್ತು ಧಾರ್ಮಿಕ ಮಿತ್ರ ಪಕ್ಷಗಳು ಬಹುಮತಕ್ಕೆ ಸಾಕಾಗುವ 65 ಸ್ಥಾನಗಳನ್ನು ಗೆದ್ದಿದ್ದರೂ, ಮೈತ್ರಿಕೂಟವೊಂದನ್ನು ರಚಿಸಲು ನೆತನ್ಯಾಹುರಿಗೆ ಸಾಧ್ಯವಾಗಿರಲಿಲ್ಲ. ಸರಕಾರ ರಚಿಸುವ ಸಾಂವಿಧಾನಿಕ ಅವಧಿ ಬುಧವಾರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಸಂಸತ್ತನ್ನು ವಿಸರ್ಜಿಸಿ ಸೆಪ್ಟಂಬರ್ 17ರಂದು ಹೊಸದಾಗಿ ಚುನಾವಣೆ ನಡೆಸುವ ನಿರ್ಣಯವನ್ನು ಸಂಸತ್ತು 74-45 ಮತಗಳ ಅಂತರದಿಂದ ಅಂಗೀಕರಿಸಿತು.

ತನ್ನ ಸುದೀರ್ಘ ಅಧಿಕಾರಾವಧಿಯನ್ನು ಮುಂದುವರಿಸುವುದಕ್ಕಾಗಿ ನೆತನ್ಯಾಹು ಒತ್ತಡದ ತೆರೆಮರೆಯ ಪ್ರಯತ್ನಗಳನ್ನು ನಡೆಸಿದ್ದರು. ಆದರೆ, ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೊಸ ಚುನಾವಣೆಯತ್ತ ಇಸ್ರೇಲ್ ಮುಂದಡಿಯಿಟ್ಟಿದೆ.

ಚುನಾವಣೆ ಘೋಷಣೆಯು, ಸರಕಾರ ರಚಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಅಧ್ಯಕ್ಷ ರೂವೆನ್ ರಿವ್ಲಿನ್ ಇನ್ನೋರ್ವ ವ್ಯಕ್ತಿಯನ್ನು ಆಹ್ವಾನಿಸುವ ಸಾಧ್ಯತೆಯನ್ನು ತಳ್ಳಿಹಾಕುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News