ಮೌಲ್ಯಮಾಪಕರ ತಪ್ಪಿಗೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳು

Update: 2019-05-30 17:58 GMT

ಮಾನ್ಯರೇ,

ಪರೀಕ್ಷೆಗಾಗಿ ವರ್ಷ ಪೂರ್ತಿ ಓದಿ ಉತ್ತಮ ಅಂಕಗಳಿಸಬೇಕು ಎಂಬುದು ಎಲ್ಲಾ ವಿದ್ಯಾರ್ಥಿಗಳ ಮಹಾದಾಸೆ. ಎಸೆಸೆಲ್ಸಿಯಿಂದ ಸ್ನಾತಕೋತ್ತರ ಪದವಿಯವರೆಗೆ ಮೌಲ್ಯಮಾಪನ ಯಡವಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿರುವ ಅನೇಕ ನಿದರ್ಶನಗಳಿವೆ. ಎಷ್ಟೋ ಬಾರಿ ಆತ್ಮಹತ್ಯೆಯ ಪ್ರಯತ್ನಗಳು ನಡೆದಿರುವುದುಂಟು. ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 8.41ಲಕ್ಷ. ಪಿಯುಸಿ ಪರೀಕ್ಷೆ ಬರೆದವರ ಸಂಖ್ಯೆ 6.71ಲಕ್ಷ. ಪಿಯುಸಿ ಮೌಲ್ಯ ಮಾಪನಕ್ಕೆ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಅನೇಕ ವಿದ್ಯಾರ್ಥಿಗಳ ಅಂಕಗಳಲ್ಲಿ 10ರಿಂದ 30 ಅಂಕಗಳು ಏರಿಕೆಯಾಗಿದೆ. ಈ ಬಾರಿ ಎಸೆಸೆಲ್ಸಿಯಲ್ಲಿ 2 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ ಆಗಿದ್ದರು, ಮರುಮೌಲ್ಯಮಾಪನ ನಂತರ 4 ವಿದ್ಯಾರ್ಥಿಗಳು ಅಗ್ರಸ್ಥಾನಕ್ಕೇರಿದ್ದಾರೆ.

ವಿದ್ಯಾರ್ಥಿ ಬದುಕಲ್ಲಿ ಒಂದೇ ಒಂದು ಅಂಕ ಕಡಿಮೆ ಬಂದರೆ ಏನೆಲ್ಲಾ ಸಮಸ್ಯೆಗಳಾಗಬಹುದು ಎಂಬುದು ತಿಳಿದಿರುವ ವಿಚಾರ. ಅಂಕ ಕಡಿಮೆ ಬಂದಿರುವುದರ ಪರಿಣಾಮ ಅನೇಕ ವಿದ್ಯಾರ್ಥಿ ಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ದುಬಾರಿಯಾಗುತ್ತಿರುವ ಮೌಲ್ಯಮಾಪನದ ವೆಚ್ಚ ಬಡವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಇದರಿಂದ ಸಾಕಷ್ಟು ಹಣ ವ್ಯರ್ಥವಾಗುತ್ತಿದೆ. ಮೌಲ್ಯಮಾಪನ ವಿದ್ಯಾರ್ಥಿಗಳ ಜೀವನದಲ್ಲಿ ತುಂಬಾ ಆತಂಕ ಸೃಷ್ಟಿಸುತ್ತಿದೆ. ತೆಲಂಗಾಣದಲ್ಲಿ ಪಿಯುಸಿ ಫಲಿತಾಂಶ ಬಂದ ಬಳಿಕ ಒಂದೇ ವಾರದಲ್ಲಿ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಸೊನ್ನೆ ಅಂಕ ಪಡೆದ ವಿದ್ಯಾರ್ಥಿನಿಯೊಬ್ಬಳ ಉತ್ತರ ಪತ್ರಿಕೆ ಪರಿಶೀಲಿಸಿ ನೋಡಿದಾಗ ಆಕೆಗೆ 99 ಅಂಕ ಬಂದಿರುವುದು ತಿಳಿಯಿತು. ಬಡ ವಿದ್ಯಾರ್ಥಿಗಳು ಹಣ ಕಟ್ಟಲು ಸಾಧ್ಯವಾಗದೆ ಕೊಟ್ಟ ಅಂಕವನ್ನೇ ಮನಸ್ಸಿಲ್ಲದಿದ್ದರೂ ಪಡೆಯುತ್ತಾರೆ. ಇಲ್ಲಿ ಮೌಲ್ಯಮಾಪಕರ ದೋಷವೋ ಅಥವಾ ಗಣಕಯಂತ್ರಗಳ ದೋಷವೋ? ತಿಳಿಯದಾಗಿದೆ. ಕೆಲ ಶಿಕ್ಷಕರ ಬೇಜವಾಬ್ದಾರಿಯಿಂದ ಇಂತಹ ಯಡವಟ್ಟು ಆಗುತ್ತಿರುವುದು ನಿಜಕ್ಕೂ ದುರದೃಷ್ಟಕರವಾದುದು. ಹಿಂದೆ ಬೆರಳಣಿಕೆಯಷ್ಟು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿತು. ಆದರೆ ಈ ವರ್ಷ ರಾಜ್ಯದಲ್ಲಿ 54 ಕೇಂದ್ರಗಳಲ್ಲಿ ಪಿಯುಸಿ ಮೌಲ್ಯಮಾಪನ ನಡೆಸಲಾಗಿದೆ. ಈ ಬಾರಿ ಪಿಯುಸಿ ಪರೀಕ್ಷೆಗಳ ಮೌಲ್ಯಮಾಪನ 22,746 ಅಧ್ಯಾಪಕರು ಮಾಡಿದ್ದಾರೆ.

ತೆಲಂಗಾಣದಲ್ಲಿ 99 ಅಂಕ ಪಡೆದ ವಿದ್ಯಾರ್ಥಿನಿಗೆ ಆರಂಭದಲ್ಲಿ 0 ಅಂಕ ನೀಡಿದ ಮೌಲ್ಯ ಮಾಪಕರಿಗೆ ರೂ. 5,000 ದಂಡ ವಿಧಿಸಲಾಗಿದೆ. ಪ್ರತಿ ವರ್ಷ ಇಂತಹ ದುರ್ಘಟನೆಗಳು ನಡೆಯುತ್ತಲೇ ಇವೆ. ಕಾನೂನು ಕ್ರಮಗಳಿಂದ ಕಳೆದುಹೊದ ಜೀವ ಮತ್ತೆ ಬರುವುದೇ? ಶಿಕ್ಷಕ ವೃತ್ತಿಯಲ್ಲಿರುವ ಕೆಲವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೌಲ್ಯಮಾಪಕನ ತಪ್ಪಿನಿಂದ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸುವುದು ಎಷ್ಟು ಮಾತ್ರ ಸರಿ?

Writer - -ಗೌತಮಿ ಎಂ. ಕೋಟಿಗಾನಹಳ್ಳಿ

contributor

Editor - -ಗೌತಮಿ ಎಂ. ಕೋಟಿಗಾನಹಳ್ಳಿ

contributor

Similar News