×
Ad

​ಮೋದಿ ಸಂಪುಟದಲ್ಲಿ ಮೇಲ್ವರ್ಗಕ್ಕೇ ಸಿಂಹಪಾಲು

Update: 2019-05-31 09:00 IST

ಹೊಸದಿಲ್ಲಿ, ಮೇ 31: ಪ್ರಧಾನಿ ನರೇಂದ್ರ ಮೋದಿಯವರ ನೂತನ ಸಚಿವ ಸಂಪುಟದಲ್ಲಿ ಬಹುತೇಕ ಎಲ್ಲ ಜಾತಿಗಳಿಗೆ ಪ್ರಾತಿನಿಧ್ಯ ನೀಡಲಾಗಿದ್ದರೂ, ಮೇಲ್ವರ್ಗದ ಪ್ರಾಬಲ್ಯ ಎದ್ದು ಕಾಣುತ್ತಿದೆ. 58 ಮಂದಿ ಸಚಿವರ ಪೈಕಿ ಮೇಲ್ವರ್ಗದವರು 32 ಸ್ಥಾನಗಳನ್ನು ಪಡೆದಿದ್ದಾರೆ. ಇತರ ಹಿಂದುಳಿದ ವರ್ಗದವರು 13 ಮಂದಿ ಸಂಪುಟದಲ್ಲಿದ್ದಾರೆ.

ನಿತಿನ್ ಗಡ್ಕರಿ ಸೇರಿದಂತೆ ಒಂಬತ್ತು ಮಂದಿ ಬ್ರಾಹ್ಮಣರು, ರಾಜನಾಥ್‌ಸಿಂಗ್, ಜೋಧಪುರ ಸಂಸದ ಗಜೇಂದ್ರಸಿಂಗ್ ಠಾಕೂರ್ ಹಾಗೂ ಮೊರೇನಾ ಸಂಸದ ನರೇಂದ್ರ ಸಿಂಗ್ ಥೋಮರ್ ಸಂಪುಟದಲ್ಲಿ ಸ್ಥಾನ ಪಡೆದ ಠಾಕೂರ್ ಸಮುದಾಯದವರು. ಧರ್ಮೇಂದ್ರ ಪ್ರಧಾನ್ ಒಬ್ಬರೇ ಸಂಪುಟದಲ್ಲಿ ಕಾಣಿಸಿಕೊಂಡಿರುವ ಪ್ರಮುಖ ಒಬಿಸಿ ನಾಯಕ.

58 ಸಚಿವರ ಪೈಕಿ ಆರು ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ, ನಾಲ್ಕು ಮಂದಿ ಪರಿಶಿಷ್ಟ ಪಂಗಡದವರು. ಈ ಎಲ್ಲರೂ ಬಹುತೇಕ ಒಡಿಶಾ ಮತ್ತು ಜಾರ್ಖಂಡ್‌ಗೆ ಸೇರಿದವರು. ಅಕಾಲಿದಳ ಮುಖಂಡರಾದ ಹರ್‌ಸಿಮ್ರತ್ ಕೌರ್ ಬಾದಲ್ ಹಾಗೂ ಬಿಜೆಪಿಯ ಹರ್ದೀಪ್ ಪುರಿ, ಸಿಕ್ಖ್ ಸಮುದಾಯಕ್ಕೆ ಸೇರಿದ್ದರೆ ಮುಖ್ತಾರ್ ಅಬ್ಬಾಸ್ ನಕ್ವಿ, ಕೇಂದ್ರ ಸಂಪುಟದಲ್ಲಿರುವ ಏಕೈಕ ಮುಸ್ಲಿಂ ಮುಖಂಡ.

ಒಂಬತ್ತು ಬ್ರಾಹ್ಮಣ ಮುಖಂಡರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಮೋದಿ, ಆ ಸಮುದಾಯಕ್ಕೆ ಪ್ರಬಲ ಸಂದೇಶ ರವಾನಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಅವರನ್ನು ನೇಮಕ ಮಾಡಿರುವುದಕ್ಕೆ ಮುನಿಸಿಕೊಂಡಿದ್ದರೂ, ಬ್ರಾಹ್ಮಣ ಸಮುದಾಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿತ್ತು. ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News