×
Ad

ಸುಷ್ಮಾ ವಿದಾಯ ಟಿಪ್ಪಣಿಯಲ್ಲೇನಿದೆ ಗೊತ್ತೇ?

Update: 2019-05-31 09:17 IST

ಹೊಸದಿಲ್ಲಿ, ಮೇ 31: ಮೋದಿ ಸಂಪುಟದಲ್ಲಿ ಸ್ಥಾನ ಕಳೆದುಕೊಂಡಿರುವ ಹಿರಿಯ ಮುಖಂಡೆ ಸುಷ್ಮಾ ಸ್ವರಾಜ್, ಪ್ರಧಾನಿ ನರೇಂದ್ರ ಮೋದಿಯವರಿಗೆ ವಿದಾಯ ಟಿಪ್ಪಣಿ ಟ್ವೀಟ್ ಮಾಡಿದ್ದಾರೆ.

ಭಾರತೀಯರು ಹಾಗೂ ಅನಿವಾಸಿ ಭಾರತೀಯರಿಗೆ ಸೇವೆ ಸಲ್ಲಿಸಲು ಐದು ವರ್ಷಗಳ ಕಾಲ ಅವಕಾಶ ಮಾಡಿಕೊಟ್ಟ ನರೇಂದ್ರ ಮೋದಿಯವರಿಗೆ 67 ವರ್ಷ ವಯಸ್ಸಿನ ಸ್ವರಾಜ್ ಕೃತಜ್ಞತೆ ಹೇಳಿದ್ದಾರೆ. ಐದು ವರ್ಷಗಳ ಕಾಲ ತಮ್ಮ ಬಗ್ಗೆ ತೋರಿದ ಗೌರವ ಹಾಗೂ ಸೌಜನ್ಯಕ್ಕೂ ಕೃತಜ್ಞತೆ ಸಲ್ಲಿಸಿದ್ದಾರೆ.

"ನಾನು ನಿಮಗೆ ಕೃತಜ್ಞಳಾಗಿದ್ದೇನೆ. ದೇವರಲ್ಲಿ ನನ್ನ ಏಕೈಕ ಪ್ರಾರ್ಥನೆಯೆಂದರೆ, ನಮ್ಮ ಸರ್ಕಾರ ಅದ್ಭುತವಾಗಿ ಮುನ್ನಡೆಯಲಿ" ಎಂದು ಆಶಿಸಿದ್ದಾರೆ. ವಿದೇಶಗಳಲ್ಲಿರುವ ಭಾರತೀಯರಿಗೆ ತಕ್ಷಣ ಸ್ಪಂದಿಸಲು ಹಾಗೂ ನೆರವು ನೀಡಲು ಮೈಕ್ರೊ ಬ್ಲಾಗಿಂಗ್ ಸೈಟ್ ಬಳಸಿಕೊಂಡ ಬಗ್ಗೆ ಸ್ವರಾಜ್, ಲಕ್ಷಾಂತರ ಮಂದಿಯ ಶ್ಲಾಘನೆಗೆ ಪಾತ್ರರಾಗಿದ್ದರು.

ಸುಷ್ಮಾ ಈ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ 6,000 ಮಂದಿ ಇದನ್ನು ಮರುಟ್ವೀಟ್ ಮಾಡಿದ್ದಾರೆ. ಮೋದಿಯವರ ನೂತನ ಸಂಪುಟ ಪ್ರಮಾಣವಚನ ಸ್ವೀಕರಿಸುತ್ತಿದ್ದಾಗ ಸುಷ್ಮಾ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

ಬಿಜೆಪಿಯ ಪ್ರಮುಖ ಮಹಿಳಾ ಮುಖಂಡರಲ್ಲೊಬ್ಬರಾಗಿದ್ದ ಸುಷ್ಮಾ, ಒಂದು ದಶಕದ ಕಾಲ ಯುಪಿಎ ಅಧಿಕಾರದಲ್ಲಿದ್ದಾಗ ಲೋಕಸಭೆಯ ವಿರೋಧ ಪಕ್ಷದ ನಾಯಕಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News