×
Ad

ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆ: ಎನ್‌ಕೌಂಟರ್ ಬಳಿಕ ಆರೋಪಿಯ ಸೆರೆ

Update: 2019-06-01 09:01 IST
ಸುರೇಂದ್ರ ಪ್ರತಾಪ್ ಸಿಂಗ್

ಲಕ್ನೋ, ಜೂ.1: ಅಮೇಥಿ ಸಂಸದೆ ಸ್ಮೃತಿ ಇರಾನಿಯವರ ಸಹಚರ ಸುರೇಂದ್ರ ಪ್ರತಾಪ್ ಸಿಂಗ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಜಮೋನ್ ಪ್ರದೇಶದಲ್ಲಿ ಎನ್‌ಕೌಂಟರ್ ಬಳಿಕ ಸೆರೆ ಹಿಡಿಯಲಾಗಿದೆ.

ಬರೌಲಿಯಾ ಗ್ರಾಮ ಪ್ರಧಾನರಾಗಿದ್ದ ಸಿಂಗ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಪರವಾಗಿ ಫಲಿತಾಂಶ ಬರಲು ಅಪಾರವಾಗಿ ಶ್ರಮಿಸಿದ್ದರು. ಮೇ 26ರಂದು ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ರೂವಾರಿ ವಾಸಿಂ ಎಂಬಾತನನ್ನು ಶುಕ್ರವಾರ ಬಂಧಿಸಲಾಗಿದೆ. ಘಟನೆ ಬಳಿಕ ಆತ ತಲೆಮರೆಸಿಕೊಂಡಿದ್ದ.

ಆತನ ಸಹಚರರಾದ ನಸೀಮ್, ಧರ್ಮನಾಥ್ ಗುಪ್ತಾ, ರಾಮಚಂದ್ರ ಮತ್ತು ಗೋಲು ಎಂಬುವವರನ್ನು ಈಗಾಗಲೇ ಬಂಧಿಸಲಾಗಿತ್ತು. ಪೊಲೀಸರು ವಾಸಿಂನಿಂದ ದೇಶಿ ನಿರ್ಮಿತ 0.315 ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

ಜಮೋನ್ ಗ್ರಾಮದಲ್ಲಿ ನಡೆದ ಮಧ್ಯರಾತ್ರಿಯ ಕಾರ್ಯಾಚರಣೆಯಲ್ಲಿ ಪೊಲೀಸರು ಮೊದಲು ಆರೋಪಿಯನ್ನು ಸುತ್ತುವರಿದಿದ್ದರು. ಆದರೆ ಎರಡು ಸುತ್ತು ಗುಂಡು ಹಾರಿಸಿ ಆತ ಪರಾರಿಯಾಗಿದ್ದ. ಮತ್ತೆ ಆರ್‌ಎಸ್ ಪಬ್ಲಿಕ್ ಶಾಲೆ ಬಳಿ ಆತನನ್ನು ಬೆನ್ನಟ್ಟಿ, ಆತ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನತ್ತ ಗುಂಡು ಹಾರಿಸಿದರು. ಆತನ ಬಲಗಾಲಿಗೆ ಗುಂಡು ತಗುಲಿ ಆತ ಬೈಕ್‌ನಿಂದ ಬಿದ್ದ ಎಂದು ಅಮೇಥಿ ಎಸ್ಪಿ ರಾಜೇಶ್ ಕುಮಾರ್ ವಿವರ ನೀಡಿದ್ದಾರೆ.

ಹತ್ಯೆಗೀಡಾದ ಸುರೇಂದ್ರ, ಗ್ರಾಮಪಂಚಾಯತ್ ಚುನಾವಣೆಯಲ್ಲಿ ರಾಮಚಂದ್ರನ ಗೆಲುವಿನ ಅವಕಾಶವನ್ನು ಹಾಳು ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಜತೆಗೆ ಸುರೇಂದ್ರ, ರಾಮಚಂದ್ರನ ಸಹೋದರ ಹಾಗೂ ಪೋಷಕರ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.

ಹತ್ಯೆಗೆ ಹಿಂದಿನ ದಿನ ರಾತ್ರಿ ಎಲ್ಲ ಐದು ಮಂದಿ ಆರೋಪಿಗಳು ಸುರೇಂದ್ರ ಜತೆಗೆ ವಿವಾಹ ಸಮಾರಂಭಕ್ಕೆ ಹೋಗಿದ್ದರು. ಆಗ ಘರ್ಷಣೆ ನಡೆದಿತ್ತು. ವಾಸಿಂ ಪ್ರತೀಕಾರದ ಕ್ರಮಕ್ಕೆ ಮುಂದಾದ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News