ಉತ್ತರ ಪ್ರದೇಶ: ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಮಾಜವಾದಿ ಪಕ್ಷದ ನಾಯಕರ ಗುಂಡಿಕ್ಕಿ ಹತ್ಯೆ

Update: 2019-06-01 07:21 GMT

ಲಕ್ನೋ, ಜೂ.1: ಉತ್ತರ ಪ್ರದೇಶದಲ್ಲಿ ಶುಕ್ರವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಮಾಜವಾದಿ ಪಕ್ಷದ ನಾಯಕರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಆದರೆ ಎರಡೂ ಪ್ರಕರಣಗಳಲ್ಲಿ ರಾಜಕೀಯ ವೈಷಮ್ಯ ಕೊಲೆಗೆ ಕಾರಣವಾಗಿರಬಹುದಾದ ಸಾಧ್ಯತೆಯನ್ನು ಪೊಲೀಸರು ಅಲ್ಲಗಳೆದಿದ್ದಾರೆ.

ಲಾಲ್ಜಿ ಯಾದವ್ (41) ಎಂಬವರನ್ನು ಜೌನ್ಪುರ್ ಜಿಲ್ಲೆಯ ಸಿದ್ದೀಖ್‌ಪುರ್ ಸಮೀಪ್ ಖ್ವಾಜ ಸರಾಯಿ ಪ್ರದೇಶದಲ್ಲಿ ಬೆಳಗ್ಗೆ 9:30ರ ಸುಮಾರಿಗೆ ಹತ್ಯೆಗೈಯ್ಯಲಾಗಿದೆ. ಅವರು ತಮ್ಮ ಎಸ್‌ಯುವಿಯಲ್ಲಿ ಶಾಹಗಂಜ್-ಜೌನ್ಪುರ್ ರಸ್ತೆಯಲ್ಲಿ ಸಾಗುತ್ತಿದ್ದಾಗ ಒಬ್ಬರೊಂದಿಗೆ ಮಾತನಾಡಲು ವಾಹನ ನಿಲ್ಲಿಸಿದ್ದಾಗ ಮೋಟಾರ್ ಸೈಕಲ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದ ಯಾದವ್ ವಿರುದ್ಧ ಕೊಲೆ ಮತ್ತಿತರ ಕ್ರಿಮಿನಲ್ ಪ್ರಕರಣಗಳಿದ್ದವು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದು ವೈಯಕ್ತಿಕ ದ್ವೇಷದಿಂದ ನಡೆದ ಕೊಲೆಯೇ ಹೊರತು ರಾಜಕೀಯ ದ್ವೇಷದಿಂದಲ್ಲವೆಂಬುದು ಹೊರನೋಟಕ್ಕೆ ತಿಳಿಯುತ್ತದೆ, ಯಾದವ್ ಅವರು ಗೂಂಡಾ ಕಾಯ್ದೆಯನ್ವಯ ಪ್ರಕರಣ ಎದುರಿಸುತ್ತಿದ್ದರು ಎಂದು ಎಸ್ಪಿ ಆಶಿಷ್ ತಿವಾರಿ ಹೇಳಿದ್ದಾರೆ.

ಆಸ್ತಿ ವಿವಾದವೂ ಕೊಲೆಗೆ ಕಾರಣವಾಗಿರಬಹುದು, ತನಿಖೆಯ ನಂತರ ಸತ್ಯ ತಿಳಿದು ಬರಬಹುದೆಂದು ಜೌನ್ಪುರ್ ಗ್ರಾಮೀಣ ಹೆಚ್ಚುವರಿ ಎಸ್ಪಿ ಸಂಜಯ್ ರಾಯ್ ಹೇಳಿದ್ದಾರೆ.

ಇನ್ನೊಂದು ಘಟನೆಯಲ್ಲಿ ಗೌತಮ್ ಬುದ್ಧ್ ನಗರ್ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ ದಾದ್ರಿ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ರಾಮ್ ಠೇಕ್ ಕಠಾರಿಯಾ ಎಂಬವರನ್ನು ಅವರ ಮನೆಯ ಸಮೀಪ ಜರ್ಚಾ ರಸ್ತೆಯಲ್ಲಿ ಅವರು ನಿರ್ಮಾಣ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ವೇಳೆ ಮೂವರು ಮುಸುಕುಧಾರಿ ವ್ಯಕ್ತಿಗಳು ಮಧ್ಯಾಹ್ನ 12:30ರ ಸುಮಾರಿಗೆ ಗುಂಡಿಕ್ಕಿ ಸಾಯಿಸಿದ್ದಾರೆ.

ದುಷ್ಕರ್ಮಿಗಳು ಕಾರಿನಲ್ಲಿ ಬಂದು ಕನಿಷ್ಠ 10 ಸುತ್ತು ಗುಂಡು ಹಾರಿಸಿ ನಂತರ ಪರಾರಿಯಾಗಿದ್ದರು. ಕಠಾರಿಯಾಗೆ ಅವರ ಓರ್ವ ಸಹೋದರನೊಂದಿಗೆ ಇದ್ದ ದ್ವೇಷ ಕೊಲೆಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಹಲವಾರು ಬಾರಿ ಇವರ ನಡುವಿನ ಜಗಳ ಪೊಲೀಸ್ ಠಾಣೆ ಮೆಟ್ಟಲಿನವರೆಗೂ ಬಂದಿತ್ತೆಂದೂ ಪೊಲೀಸರು ತಿಳಿಸಿದ್ದಾರೆ.

ಎರಡೂ ಪ್ರಕರಣಗಳ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News