ಭಾರೀ ಮೆಚ್ಚುಗೆ ಗಳಿಸಿದ್ದೇ ಮುಳುವಾಯ್ತು: ವೈರಲ್ ವಿಡಿಯೋದ ಆಟಿಕೆ ಮಾರಾಟಗಾರನ ಬಂಧನ
ಸೂರತ್, ಜೂ.1: ರೈಲಿನಲ್ಲಿ ಆಟಿಕೆಗಳನ್ನು ಮಾರಾಟ ಮಾಡುವ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಸಹಿತ ಇತರ ರಾಜಕಾರಣಿಗಳನ್ನು ಅನುಕರಿಸಿ ಅಣಕಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಆ ವ್ಯಕ್ತಿಯನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಸೂರತ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಅವಧೇಶ್ ದುಬೆ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ರೈಲ್ವೆ ಕಾಯಿದೆಯ ವಿವಿಧ ಸೆಕ್ಷನ್‍ಗಳನ್ವಯ ಪ್ರಕರಣ ದಾಖಲಿಸಲಾಗಿದೆ.
ಈತ ರೈಲಿನಲ್ಲಿ ಪ್ರಯಾಣಿಕರಿಗೆ ಆಟಿಕೆಗಳನ್ನು ಮಾರಾಟ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಸಹಿತ ಹಲವು ನಾಯಕರನ್ನು ಅನುಕರಿಸಿ ಅಣಕಿಸುತ್ತಿರುವ ಆರು ನಿಮಿಷ ಅವಧಿಯ ವೀಡಿಯೋ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ವಾರಣಾಸಿ ಮೂಲದ ದುಬೆ ಎರಡು ವರ್ಷಗಳ ಹಿಂದೆ ವಲ್ಸಾಡ್ ಗೆ ಆಗಮಿಸಿದ್ದು ಅಂದಿನಿಂದ ವಾಪಿ ಹಾಗೂ ಸೂರತ್ ನಡುವೆ ಸಂಚರಿಸುವ ರೈಲಿನಲ್ಲಿ ಆಟಿಕೆಗಳನ್ನು ಮಾರಾಟ ಮಾಡುತ್ತಿದ್ದಾನೆ.
ರೈಲಿನಲ್ಲಿ ಅಕ್ರಮವಾಗಿ ಆಟಿಕೆಗಳನ್ನು ಮಾರಾಟ ಮಾಡಿದ ಆರೋಪವನ್ನೂ ಆತನ ವಿರುದ್ಧ ಹೊರಿಸಲಾಗಿದೆ ಎಂದು ರೈಲ್ವೆ ರಕ್ಷಣಾ ದಳದ ಇನ್‍ಸ್ಪೆಕ್ಟರ್ ಈಶ್ವರ್ ಸಿಂಗ್ ಯಾದವ್ ಹೇಳಿದ್ದಾರೆ.
ಆತನನ್ನು ರೈಲ್ವೆ ನ್ಯಾಯಾಲಯದೆದುರು ಹಾಜರು ಪಡಿಸಲಾಗಿದ್ದು, 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.