ಅಮೇಥಿಯಲ್ಲಿ ರಾಹುಲ್ ಸೋಲಿನ ಬಗ್ಗೆ ಅವಲೋಕನ: ಸ್ಥಳೀಯ ನಾಯಕರ ವಿರುದ್ಧ ಆರೋಪ

Update: 2019-06-01 15:19 GMT

ಲಕ್ನೊ, ಜೂ.1: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತನ್ನ ಭದ್ರಕೋಟೆಯಾಗಿದ್ದ ಅಮೇಥಿ ಕ್ಷೇತ್ರದಲ್ಲಿ ಪಕ್ಷಾಧ್ಯಕ್ಷ ರಾಹುಲ್ ಗಾಂಧಿಗೆ ಆಗಿರುವ ಹಿನ್ನಡೆಯ ಬಗ್ಗೆ ಅವಲೋಕನ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯ ರಾಜಕೀಯ ಕಾರ್ಯಗಳ ಉಸ್ತುವಾರಿ ವಹಿಸಿರುವ ಝುಬೈರ್ ಖಾನ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯ ಪ್ರತಿನಿಧಿ ಕಿಶೋರಿಲಾಲ್ ಶರ್ಮ ಕಳೆದ ಮೂರು ದಿನಗಳಿಂದ ಅಮೇಥಿಯಲ್ಲಿ ಮೊಕ್ಕಾಂ ಹೂಡಿದ್ದು ರಾಹುಲ್ ಸೋಲಿಗೆ ಸಂಭಾವ್ಯ ಕಾರಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಗ್ರಾಮಮಟ್ಟದಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಅವಲೋಕನ ತಂಡದ ಸದಸ್ಯರು ವಿಭಾಗ ಮತ್ತು ಪಂಚಾಯತ್ ಅಧ್ಯಕ್ಷರ ಜೊತೆ ಸಭೆ ನಡೆಸಲಿದೆ ಎಂದು ಉತ್ತರಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ರಾಜೀವ್ ಸಿಂಗ್ ಹೇಳಿದ್ದಾರೆ. ರಾಹುಲ್ ಸೋಲಿಗೆ ಸ್ಥಳೀಯ ಮುಖಂಡ ಚಂದ್ರಕಾಂತ್ ದುಬೆ ಕಾರಣರಾಗಿದ್ದು ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಧರ್ಮೇಂದ್ರ ಶುಕ್ಲ ಪತ್ರ ಬರೆದಿದ್ದಾರೆ ಎಂದು ಪಕ್ಷದ ಪ್ರಮುಖರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News