ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

Update: 2019-06-01 17:18 GMT

ಚೆನ್ನೈ, ಜೂ. 1: ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಹಿಂದಿಯನ್ನು ಕಡ್ಡಾಯಗೊಳಿಸಬಾರದು ಎಂದು ಸಾಮಾಜಿಕ ಜಾಲತಾಣದ ಅಭಿಯಾನ ಆರಂಭವಾಗಿದೆ. ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಒಂದು ದಿನದ ಬಳಿಕ ಸಲ್ಲಿಸಲಾದ ಶಿಕ್ಷಣ ಕರಡು ನೀತಿಯ ವಿರುದ್ಧ ಟ್ವಿಟ್ಟರ್‌ನಲ್ಲಿ ಸಂದೇಶಗಳು ಹರಿದಾಡುತ್ತಿವೆ.

ಭಾಷೆಯನ್ನು ಭಾವನಾತ್ಮಕ ವಿಷಯವೆಂದು ದೀರ್ಘಕಾಲದಿಂದ ಪರಿಗಣಿಸಿರುವ ತಮಿಳುನಾಡಿನ ರಾಜಕಾರಣಿಗಳು ಇಸ್ರೋದ ಮಾಜಿ ವರಿಷ್ಠ ಕೃಷ್ಣಸ್ವಾಮಿ ಕಸ್ತೂರಿರಂಗನ್ ನೇತೃತ್ವದ ತಜ್ಞರ ಸಮಿತಿ ಹಿಂದಿಯನ್ನು ಕೇಂದ್ರೀಕರಿಸಿ ಮಾಡಿರುವ ಶಿಫಾರಸನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 1968ರಿಂದ ಒಂದು ವರ್ಗದ ಶಾಲೆಗಳಲ್ಲಿ ಅನುಸರಿಸಿಕೊಂಡು ಬರುತ್ತಿರುವ ‘ಮೂರು ಭಾಷೆಗಳ ಫಾರ್ಮುಲಾ’ವನ್ನು ಎಲ್ಲ ಶಾಲೆಗಳಲ್ಲಿ ಮುಂದುವರಿಸಬೇಕು. ಇದರಿಂದ ಮಕ್ಕಳು ಮೂರು ಭಾಷೆಗಳನ್ನು ಪ್ರಥಮ ಹಂತದಿಂದಲೇ ಕಲಿಯಲು ಆರಂಭಿಸುತ್ತಾರೆ ಎಂದು 2019ರ ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಹೇಳಿದೆ.

ಇದು 8ನೇ ತರಗತಿ ವರೆಗೆ ಹಿಂದಿ ಕಡ್ಡಾಯಗೊಳಿಸುವಂತೆ ಕಾಣುತ್ತಿದೆ ಎಂದು ಹೇಳಿರುವ ಸಾಮಾಜಿಕ ಜಾಲ ತಾಣದ ಬಳಕೆದಾರರು ಈ ನಡೆಯ ವಿರುದ್ಧ ಸಂದೇಶ ರವಾನಿಸುತ್ತಿದ್ದಾರೆ. ‘ಹಿಂದಿ ಹೇರುವುದನ್ನು ನಿಲ್ಲಿಸಿ’ ಹಾಗೂ ‘ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು’ ಹ್ಯಾಶ್ ಟ್ಯಾಗ್‌ಗಳು ಸಾಮಾಜಿಕ ಜಾಲತಾಣದಲ್ಲಿ ಟಾಪ್ ಟ್ರೆಂಡ್ ಆಗಿದೆ. ನೂತನ ಶಿಕ್ಷಣ ನೀತಿಯನ್ನು ರಾಜ್ಯದಿಂದ ದೂರವಿರಿಸಲಾಗುತ್ತದೆ ಎಂದು ತಮಿಳುನಾಡಿನ ಶಾಲಾ ಶಿಕ್ಷಣ ಸಚಿವರು ತಿಳಿಸಿದ್ದಾರೆ. ‘‘ತಮಿಳುನಾಡು ಎರಡು ಭಾಷೆಯ ನೀತಿ ಮಾತ್ರ ಅನುಸರಿಸಲಿದೆ. ತಮಿಳುನಾಡಿನಲ್ಲಿ ಕೇವಲ ತಮಿಳು ಹಾಗೂ ಇಂಗ್ಲಿಷ್ ಸಾಕು.’’ ಎಂದು ಬಿಜೆಪಿ ಮಿತ್ರ ಪಕ್ಷವಾಗಿರುವ ಎಐಎಡಿಎಂಕೆ ಪಕ್ಷದ ಕೆ.ಎ. ಸೆಂಗೊಟ್ಟೈಯನ್ ತಿಳಿಸಿದ್ದಾರೆ. ‘‘ಹಿಂದಿ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ. ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ’’ ಎಂದು ಡಿಎಂಕೆ ಸಂಸದೆ ಕನ್ನಿಮೋಳ್ ತಿಳಿಸಿದ್ದಾರೆ. ‘ಭಾಷಾ ಯುದ್ಧ’ ಆರಂಭವಾಗಲಿದೆ ಎಂದು ಎಂಡಿಎಂಕೆ ನಾಯಕ ವೈಕೊ ಎಚ್ಚರಿಸಿದ್ದಾರೆ. ಹಿಂದಿ ಮಾತನಾಡದ ರಾಜ್ಯದಲ್ಲಿ ಹಿಂದಿ ಹೇರುವುದರಿಂದ ಬಹುತ್ವ ನಾಶವಾಗುತ್ತದೆ. ಹಿಂದಿ ಮಾತನಾಡದವರು ದ್ವಿತೀಯ ದರ್ಜೆಯ ಪ್ರಜೆಗಳಾಗುತ್ತಾರೆ ಎಂದು ಎಎಂಎಂಕೆಯ ನಾಯಕ ಟಿಟಿವಿ ದಿನಕರನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News