ಉ.ಪ್ರದೇಶ: ಸಂಪುಟ ಸಭೆಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ
ಲಕ್ನೋ,ಜೂ 1: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಸಂಪುಟ ಸಭೆಗಳು ಸೇರಿದಂತೆ ತನ್ನ ಅಧಿಕೃತ ಸಭೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಿದ್ದಾರೆ.
ಎಲ್ಲ ಸಚಿವರು ಸಂಪುಟ ಸಭೆಗಳಲ್ಲಿ ಚರ್ಚೆಯಾಗುವ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು ಮತ್ತು ಮೊಬೈಲ್ ಫೋನ್‌ಗಳು ಅವರ ಗಮನವನ್ನು ಸೆಳೆಯಬಾರದು ಎಂದು ಮುಖ್ಯಮಂತ್ರಿಗಳು ಬಯಸಿದ್ದಾರೆ. ಸಭೆಗಳು ನಡೆಯುತ್ತಿರುವಾಗ ಕೆಲವು ಸಚಿವರು ವಾಟ್ಸ್‌ಆ್ಯಪ್ ಸಂದೇಶಗಳನ್ನು ಓದುವುದರಲ್ಲಿ ವ್ಯಸ್ತರಾಗಿರುತ್ತಿದ್ದರು ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು. ಹ್ಯಾಕಿಂಗ್ ಮತ್ತು ವಿದ್ಯುನ್ಮಾನ ಬೇಹುಗಾರಿಕೆಯ ಬೆದರಿಕೆಗಳ ಹಿನ್ನೆಲೆಯಲ್ಲಿಯೂ ಮೊಬೈಲ್ ನಿಷೇಧ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.
ಈ ಮೊದಲು ಸಚಿವರು ಸಭೆಗಳಿಗೆ ಮೊಬೈಲ್ ಫೋನ್‌ಗಳನ್ನು ತರಲು ಅವಕಾಶವಿತ್ತು,ಆದರೆ ಅವುಗಳನ್ನು ಸೈಲೆಂಟ್ ಮೋಡ್‌ನಲ್ಲಿರಿಸಬೇಕಿತ್ತು. ಇನ್ನು ಮುಂದೆ ಅವರು ತಮ್ಮ ಪೋನ್‌ಗಳನ್ನು ನಿಯೋಜಿತ ಕೌಂಟರ್‌ನಲ್ಲಿ ನೀಡಬೇಕಾಗುತ್ತದೆ.